ಕಾವ್ಯ ಮತ್ತು ಕವಿತ್ವ: ಜಿ. ಎಸ್. ಶಿವರುದ್ರಪ್ಪ ಅವರ ಅನಿಸಿಕೆಗಳು

ನಾನು ಕನ್ನಡ ಪದ್ಯಗಳನ್ನು ಆಗಾಗ್ಗೆ ಬರೆಯುವುದುಂಟು. ಆದರೆ, ಆ ಪದ್ಯಗಳನ್ನು ಕವಿಯಾಗಿ ಓದಬಲ್ಲ ಮನಸ್ಸುಗಳು ಸಿಕ್ಕುವುದು ಈಗ ಬಲು ಕಷ್ಟ.  ಆ ಕೊರತೆಯನ್ನು ನೀಗಿಸಿಕೊಳ್ಳುವ ಸಲುವಾಗಿ, ಇತ್ತೀಚೆಗೆ ಕನ್ನಡದ ಹಿರಿಯ ಕವಿ ಜಿ. ಎಸ್.  ಶಿವರುದ್ರಪ್ಪ ಅವರನ್ನು ನೋಡಿ ಅವರಿಗೆ ನಾನು ಬರೆದ ಕೆಲವು ಪದ್ಯಗಳನ್ನು ತೋರಿಸಿ ಸಲಹೆ ಪಡೆಯೋಣವೆಂದು ಹೋಗಿದ್ದೆ.  ಅವರು ಧಾರಾಳವಾಗಿ ಸುಮಾರು ೬೦ ನಿಮಿಷಗಳ ಕಾಲ ನನ್ನೊಂದಿಗೆ ಮಾತನಾಡಿದರು. ಆ ಸಂದರ್ಭದಲ್ಲಿ ಕವಿಯ ಧರ್ಮ ಮತ್ತು ಕವಿತ್ವದ ಕುರಿತಾಗಿ ಅವರಾಡಿದ ಮಾತುಗಳನ್ನು ಸಂಗ್ರಹಿಸಿ ಪ್ರಶ್ನೋತ್ತರ ರೂಪದಲ್ಲಿ ಇಲ್ಲಿ ಬರೆದಿದ್ದೇನೆ.  ನನ್ನ ಪ್ರಶ್ನೆಗಳು ಮತ್ತು ಅರ್ಥಗ್ರಹಿಕೆ ಬಾಲಿಶವಾಗಿವೆ.  ಕಂಠೀರವದ ಓದುಗರು ಇದನ್ನು ಇಷ್ಟಪಟ್ಟು ಸ್ವೀಕರಿಸುತ್ತೀರೆಂದು ನಂಬಿದ್ದೇನೆ.

ಜಿ.ಎಸ್.ಎಸ್: (ನಾನು ಬರೆದ ಕೆಲವು ಪದ್ಯಗಳನ್ನು ಓದಿ, ಕೆಲವು ಪದಗಳ ಕೆಳಗೆ ಗೆರೆ ಎಳೆದು)  ಈ ಶಬ್ದಗಳು ನಿಘಂಟಿನಲ್ಲಿವೆಯೇ?

ಕಂಠೀ: ಕೆಲವಿವೆ.  ಕೆಲವನ್ನು ನಾನೇ ಹುಟ್ಟು ಹಾಕಿದ್ದೇನೆ.

ಜಿ.ಎಸ್.ಎಸ್: ಇಲ್ಲಿ ನೀವು ಸ್ವಲ್ಪ ಎಚ್ಚರ ವಹಿಸಬೇಕು.  ಶಬ್ದಗಳು ನಿಘಂಟಿನಲ್ಲಿ ಇದ್ದರೂ ಅವುಗಳನ್ನು ಉಪಯೋಗಿಸುವಾಗ ಎಚ್ಚರಿಕೆಯಿಂದಿರಬೇಕು.
ನೀವು ಇನ್ನೂ ಸ್ವಲ್ಪ ದಿನಗಳು ಕಾದು, ಕೆಲವು ಪದ್ಯಗಳನ್ನು ರೀ-ರೈಟ್ ಮಾಡಬಹುದು.

ಕಂಠೀ: ಹಾಗೆ ಮಾಡ್ಬಹುದಾ ಸರ್?  ಒಂದ್ಸರಿ ಬರೆದ ಮೇಲೆ, ತಿರ್ಗ ಅದನ್ನ ಬದಲಾಯಿಸುವುದಕ್ಕೆ ಅವಕಾಶವಿದೆಯೇ?

ಜಿ.ಎಸ್.ಎಸ್: ಯಾಕಾಗ್ಬಾರ್ದು?  ಖಂಡಿತವಾಗಿ ಮಾಡಬಹುದು. ಸತತವಾಗಿ ಬರೆಯಬೇಕು…ಬರೆದದ್ದನ್ನು ತಿದ್ದುತ್ತಿರಬೇಕು.  ನಾನಂತೂ ಬೇಕಾದಷ್ಟು ಸಾರಿ ತಿದ್ದುವ ಕೆಲಸ ಮಾಡುತ್ತಲೇ ಇರುತ್ತೇನೆ.
ಪದವಿಟ್ ಅಳುಪದೊಂದಗ್ಗಳಿಕೆ” ಅಂತ, ಒಂದು ಪದ ಬರೆದಮೇಲೆ ಅದನ್ನು ಅಳಿಸುತ್ತಿರಲ್ಲವಂತೆ ಕುಮಾರವ್ಯಾಸ…ಅದು ಎಲ್ಲರಿಗೂ ಸಾಧ್ಯವಿಲ್ಲ (ನಗು).

ಕಂಠೀ: ಸರ್, ಕವಿ ಬರೆದ ಎಲ್ಲಾ ಪದ್ಯಗಳನ್ನೂ, ಇದು ಚೆನ್ನಾಗಿದೆ ಅದು ಚೆನ್ನಾಗಿಲ್ಲ ಎಂದು ವಿಂಗಡಿಸಿ, ಚೆನ್ನಾಗಿದೆ ಅನ್ನಿಸಿದ್ದನ್ನು ಮಾತ್ರ ಪ್ರಕಟಿಸಬೇಕು ಅನ್ನುವ ವಾದವೊಂದಿದೆ.  ಕವಿ ಬರೆದಿದ್ದೆಲ್ಲವನ್ನೂ ಪ್ರಕಟಿಸಬೇಕೆಂಬ ವಾದ ಇನ್ನೊಂದಿದೆ.  ನೀವು ಯಾವುದನ್ನು ಒಪ್ಪುತ್ತೀರಿ?

ಜಿ.ಎಸ್.ಎಸ್:ನೀವು ಬರೆದದ್ದು ನಿಮಗೇ ಇಷ್ಟವಾಗದ ಸಂದರ್ಭಗಳು ಬರುತ್ತಲೇ ಇರುತ್ತವೆ. ನಾನು ಬರೆದ ಕೆಟ್ಟ ಮತ್ತು ಒಳ್ಳೆಯ ಪದ್ಯಗಳೆಲ್ಲವೂ ಅಚ್ಚಾಗಿವೆ.  ನಾನು ೧೯೪೦ ರ ದಶಕದಲ್ಲಿ ಎಷ್ಟೊಂದು ಕಥೆಗಳನ್ನು ಬರೆದೆ.  ಎಲ್ಲವನ್ನೂ ಹರಿದು ಬಿಸಾಕಿದೆ.  ಸ್ವಧರ್ಮ ಯಾವುದೆಂದು ಅರಿತುಕೊಳ್ಳುವುದೇ ನಿಜವಾದ ಕಷ್ಟದ ಕೆಲಸ.  ಪದ್ಯ ಬರೆಯುವ ಕ್ರಮದಲ್ಲೂ ಸ್ವಧರ್ಮ ಯಾವುದೆಂದು ತಿಳಿದುಕೊಳ್ಳಲು ಸತತವಾಗಿ ಬರೆಯಬೇಕು, ಬರೆದದ್ದನ್ನು ತಿದ್ದಬೇಕು.
ನೀವು ಬರೆದಿರುವ ಕೆಲವು ಪದ್ಯಗಳು “ಪ್ರೊಸೇಯಿಕ್” ಆಗಿದೆ. ನೀವು ಮತ್ತೆ ಮತ್ತೆ ಓದಿ, ತಿದ್ದಿ, ಪದ್ಯಗಳನ್ನು ಇಂಪ್ರೊವ್ ಮಾಡಿ. ಅದಕ್ಕೆ ಅವಕಾಶವಿದೆ.

ಕಂಠೀ: ಕಾವ್ಯಕ್ಕಿರಬೇಕಾದ ಗೇಯತೆಗೂ, ಹಾಡಿನಲ್ಲಿರುವ ಗೇಯತೆಗೂ ವ್ಯತ್ಯಾಸವಿದೆ ಅನ್ನಿಸುತ್ತೆ.  ಆದರೆ, ಎಷ್ಟೋ ಬಾರಿ, ಹಾಡಾಗಿ ಆರಂಭವಾದ ಆಲೋಚನೆಯೇ ಪದ್ಯವಾಗುವುದುಂಟು.  ಇದರ ಬಗ್ಗೆ ನೀವೇನೆನ್ನುತ್ತೇರಿ?

ಜಿ.ಎಸ್.ಎಸ್: ಕಾವ್ಯದ್ದು ಹುಡುಕಾಟದ ಗುಣ.  ಗೇಯತೆ ಇರಲೇಬೇಕೆಂಬ ನಿಯಮವಿಲ್ಲ.  ಕಾವ್ಯ ಹಾಡಾಗಬಾರದು. ಗೇಯತೆ ಕಾವ್ಯದ ಎರಡನೇ ಗುಣ. ಹಾಡು ಬರೆದು ಅದರಲ್ಲಿ ಪದ್ಯ ಹುಡುಕಬಾರದು. (ಹಾಡು ಬರೆಯುವವರು ಮೊದಲು ರಾಗದಲ್ಲಿ, ಶಬ್ದಾತೀತವಾಗಿ ಯೋಚಿಸಿ, ನಂತರ ಸಾಹಿತ್ಯದಲ್ಲಿ ಆ ರಾಗಕ್ಕೆ ತಕ್ಕ ಭಾವನೆಗಳನ್ನು ಅದರಲ್ಲಿ ತುಂಬುತ್ತಾರೆ). ಕಾವ್ಯ ರಚನೆಯಲ್ಲಿ ಕವಿತೆಗೆ, ಅದರ ಧ್ವನಿಗೆ ಮೊದಲ ಆದ್ಯತೆ.  ಅದು, ಸಂಗೀತಕ್ಕೆ ಒಗ್ಗುವುದಾದರೆ ಮುಂದೆ ಪ್ರಯತ್ನಿಸಬಹುದು.
ನೀವು ನಿಮ್ಮ ಸಮಕಾಲೀನ ಕನ್ನಡ ಕವಿತೆಗಳೆಲ್ಲವನ್ನೂ ಓದಬೇಕು.

ಕಂಠೀ: ಸಮಕಾಲೀನ ಅಂದ್ರೆ…೨೦೦೦ ಇಸವಿಯಿಂದ ಈಚೆಗೆ ಬರೆದಿದ್ದೂಂತಾನ ನೀವ್ ಹೇಳೋದು?

ಜಿ.ಎಸ್.ಎಸ್: (ನಕ್ಕು)…ಅಲ್ಲಲ್ಲ…ಸಮಕಾಲೀನ ಅಂದ್ರೆ…ನಮ್ಮ ಸಮಕಾಲೀನ…

ಕಂಠೀ: ಓಹೋ…ಸರಿ ಸರ್…ಅರ್ಥ ಆಯ್ತು. ನೀವ್ ಕೂಡ ನಮ್ಮ ಸಮಕಾಲೀನರೇನೆ.  ನಾನೂ ಸಾಕಷ್ಟು ಓದಿದ್ದೇನೆ.  ಕೆಲವರ ಪದ್ಯಗಳನ್ನು ಬಹಳ ಇಷ್ಟಪಟ್ಟು ಓದಿದ್ದೇನೆ.

ಜಿ.ಎಸ್.ಎಸ್: ಇನ್ನೂ ಓದಿ.  ಕಾವ್ಯ ನಿತ್ಯದ ಪ್ರಯೋಗಕ್ಕೊಳಪಡಬೇಕು.  ಸಮಕಾಲೀನ ಪದ್ಯಗಳನ್ನು ಓದಿ ಕಾವ್ಯಪ್ರಯೋಗಗಳನ್ನು ಅರ್ಥ ಮಾಡಿಕೊಳ್ಳುವುದು ಬಹು ಮುಖ್ಯ.

ಕಂಠೀ: ಸರ್, ನಾನು ಅಲ್ಪಸ್ವಲ್ಪ ಓದಿದ್ ಮೇಲೇನೆ “ನಾನು ಹೊಸದಾಗಿ ಬರೆಯುವುದು ಏನೂ ಇಲ್ಲ” ಅನ್ನಿಸಿದೆ. ಕಳೆದ ೫೦ ವರ್ಷಗಳ ಎಲ್ಲಾ ಪದ್ಯಗಳನ್ನೂ ಓದಿಬಿಟ್ಟರೆ ನಾನು ಬರೆಯುವುದನ್ನೇ ಮರೆಯಬೇಕಷ್ಟೆ.

ಜಿ.ಎಸ್.ಎಸ್: (ಜೋರಾಗಿ ನಗು)  ಹಾಗಲ್ಲ.  ಒಬ್ಬ ಒಳ್ಳೆಯ ಕವಿಗಿರಬೇಕಾದ ಗುಣಗಳನ್ನು ಹಳಗನ್ನಡದ ಕವಿ ಎರಡನೇ ನಾಗವರ್ಮನು ಗುರುತಿಸಿಕೊಂಡಿರುವ ಬಗೆಯನ್ನು ನಿಮಗೆ ಹೇಳುತ್ತೇನೆ ಕೇಳಿ.
ಪ್ರತಿಭಾನಂ ಕಾವ್ಯವಿದ್ಯಾಪ್ರಚಯಪರಿಚಯಂ ವೃಧ್ಧಸೇವಾನುರಾಗಂ ಸತತಾಭ್ಯಾಸಪ್ರಯತ್ನಂ**

ಕವಿಗೆ ಪ್ರತಿಭೆ ಇರಬೇಕು,  ಕವಿತ್ವಕ್ಕೆ ಸಂಬಧಪಟ್ಟ ಶಾಸ್ತ್ರಗಳಾದ ಛಂದಸ್ಸು, ಅಲಂಕಾರ ಇತ್ಯಾದಿಗಳ ಪರಿಚಯ ಮತ್ತು ಅಭ್ಯಾಸಗಳಿರಬೇಕು, ಹಿರಿಯರ-ಪಂಡಿತರ ಸೇವೆ ಮಾಡುವ ಮತ್ತು ತಾನು ಕಂಡದ್ದನ್ನು ದೊಡ್ದದಾಗಿ (ಇತರರು ಬೆರಗಾಗುವಂತೆ) ತೋರಿಸಿ-ವಿವರಿಸುವ ಆಸೆಯಿರಬೇಕು, ಮತ್ತು ಕಡೆಯದಾಗಿ, ಎಲ್ಲಕ್ಕಿಂತ ಮುಖ್ಯವಾಗಿ ಕವಿಗೆ ಸತತಾಭ್ಯಾಸ ಪ್ರಯತ್ನವಿರಬೇಕು.

ಕಂಠೀ: ಸರಿ ಸರ್.  ಸಾಕಷ್ಟು ವಿಷಯ ಚರ್ಚಿಸಿದ್ದೀರಿ. ಯೋಚನೆ ಮಾಡಬೇಕಾಗಿದೆ. ನಿಮ್ಮನ್ನು ಎರಡು ಮೂರು ವರ್ಷಗಳ ನಂತರ ಪುನಃ ಕಾಣುತ್ತೇನೆ.

*ಕುಮಾರವ್ಯಾಸ ಬರೆದ “ಆದಿಪರ್ವ” ದಲ್ಲಿರುವ ಷಟ್ಪದಿಯೊಂದರ ಸಾಲು
**ಎರಡನೇ ನಾಗವರ್ಮ ಬರೆದ “ಕಾವ್ಯಾವಲೋಕನಂ” ಕೃತಿಯಿಂದ ಆರಿಸಿದ್ದು

Advertisements

3 thoughts on “ಕಾವ್ಯ ಮತ್ತು ಕವಿತ್ವ: ಜಿ. ಎಸ್. ಶಿವರುದ್ರಪ್ಪ ಅವರ ಅನಿಸಿಕೆಗಳು”

  1. ಶಿವರುದ್ರಪ್ಪನವರ ಎರಡನೆಯ ಉತ್ತರ ಓದಿ ನನಗೆ ಸ್ವಲ್ಪ ಸಮಾಧಾನ ತರಿಸಿತು. ಇದುವರೆಗೆ ಬರೆದ ನನ್ನ ಎಷ್ಟೋ ಬರಹಗಳನ್ನು ಪುನಃ ಪರಿಶೀಲಿಸಿ ತಿದ್ದುತ್ತಿದ್ದೇನೆ. ಹಾಗೂ ಕಥೆಗಳು ಒಂದು ಹಂತದಲ್ಲಿ ಬರೆದಿದ್ದು ಸ್ವಲ್ಪ ಮತ್ತೆ ಮುಂದುವರಿಸಿದ್ದೂ ಇದೆ. ಒಂದೆರಡು ಓದುಗರ ಆಶಯದ ಮೇರೆಗೆ.

    ನನ್ನ ಮನದಲ್ಲಿ ಸ್ವಲ್ಪ ಆತಂಕ ಇತ್ತು ಹೀಗೆ ಮಾಡುವುದು ತಪ್ಪಾ?ಅಂತ. ಅವರ ನುಡಿ ನೆಮ್ಮದಿ ತಂದಿತು.

    ಮೇರು ಕವಿಯೊಂದಿಗೆ ಸಂಭಾಷಣೆ ಅದ್ಭುತ. ಖುಷಿ ಆಯಿತು ಓದಿ. ಧನ್ಯವಾದಗಳು.

    1. ನನ್ನಿ ಗೀತಾ ಅವರೇ. ನೀವು ಸತತವಾಗಿ ಬರೆಯುತ್ತೀರಿ, ಸತತವಾಗಿ ತಿದ್ದುತ್ತೀರಿ ಎಂದು ತಿಳಿದು ‘ಹುಸಿ’ ಸಂಕಟ (ಸಂತಸ)ವಾಗುತ್ತಿದೆ. ಇರಲಿ ನೋಡುವ. 🙂

Please have your say

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s