ಇಬ್ಬರ ನೆನಪು

H Narasimhaiah (1921-2005); A N Murthy Rao (1900-2003)
Photo credit: National College, Bengaluru and http://www.kamat.com

ಪದವಿ ವ್ಯಾಸ೦ಗದಲ್ಲಿದ್ದಾಗ ನಮಗೆ ಎಚ್ ನರಸಿಂಹಯ್ಯ (ಎಚ್ಚೆನ್) ಅವರು ಬರೆದಿದ್ದ ಕೆಲವು ವೈಚಾರಿಕ ಪ್ರಬ೦ಧಗಳನ್ನು ಪಠ್ಯವಾಗಿ ಇಟ್ಟಿದ್ದರು.  ಅವರ ವಿಚಾರಗಳನ್ನು ಚರ್ಚಿಸುವಾಗ ಒಮ್ಮೆ ಎಚ್ಚೆನ್ನರು “ಬುದ್ಧ, ಮಹಾವೀರರಂಥ ಚಾರಿತ್ರಿಕ ವ್ಯಕ್ತಿಗಳು ಜನಾದರಣೆಗೆ ಒಳಪಟ್ಟು ಹೇಗೆ ಕ್ರಮೇಣ ದೇವರಾದರು” ಎಂದು ಹೇಳಿದ್ದಿದುದನ್ನು ಮುಂದಿಟ್ಟುಕೊಂಡು, ಎಚ್ಚೆನ್ ಮತ್ತಿತರ ಗಾಂಧಿವಾದಿಗಳು ಗಾಂಧೀಜಿಯ ವಿಚಾರಗಳನ್ನು ಆದರಿಸುವ ಮೂಲಕ ಮುಂದೊಂದು ದಿನ ಗಾಂಧೀಜಿಯನ್ನು ದೇವರನ್ನಾಗಿ ಮಾಡಬಹುದಲ್ಲವೇ? ಎಂಬ ಚರ್ಚೆ ಕೊನೆ ಮುಟ್ಟಲೇ ಇಲ್ಲ.  ಸಮಸ್ಯೆಯ ಪರಿಹಾರಕ್ಕಾಗಿ ಎಚ್ಚೆನ್ನರನ್ನೇ  ನೋಡಿ ಬರೋಣವೆಂದು ತೀರ್ಮಾನಿಸಿದೆವು.

ನಾನು ಮತ್ತು ನನ್ನ ಬೆರಳೆಣಿಕೆಯಷ್ಟು ಮಂದಿ ಗೆಳೆಯರಲ್ಲಿ ಒಬ್ಬನಾಗಿದ್ದ ಶ್ರೀಹರ್ಷ ಇಬ್ಬರೂ ಬಸವನಗುಡಿಯ ನ್ಯಾಷನಲ್ ಕಾಲೇಜಿಗೆ ಹೋದೆವು.  ಶನಿವಾರ ಮಧ್ಯಾಹ್ನ ಹನ್ನೆರಡು ಘಂಟೆ ಬಿಸಿಲಿನಲ್ಲಿ ತಮ್ಮ ಕೊಠಡಿಯ ಮುಂದೆ ಕುಳಿತಿರುವ ಚಿಗುರು ಮೀಸೆಯ ಇಬ್ಬರು ಹುಡುಗರನ್ನು ನೋಡಿದ ಎಚ್ಚೆನ್, ಪ್ರಾಂಶುಪಾಲರ ಕಛೇರಿಯಿಂದ ನಮ್ಮೆಡೆಗೆ ಬಂದರು.  ಕೋಣೆಯ ಬಾಗಿಲು ತೆಗೆದು ನಮ್ಮಿಬ್ಬರನ್ನೂ ಒಳಗೆ ಕರೆದರು.  ಚಾಪೆ ಹಾಕಿ ಕುಳ್ಳಿರಿಸಿ, ಎರಡು ಬಾಳೆಹಣ್ಣುಗಳನ್ನು ಕೊಟ್ಟು, ಐದು ನಿಮಿಷದಲ್ಲಿ ಬರುತ್ತೇನೆಂದು ಹೇಳಿ ಹೋದರು.  ನಾವಿಬ್ಬರೂ ಎಚ್ಚೆನ್ನರು ಕೊಟ್ಟ ಬಾಳೆಹಣ್ಣುಗಳನ್ನು ಸವಿಯುತ್ತಾ, ಮುಖ ಮುಖ ನೋಡಿಕೊಂದು ಮುಸಿ ಮುಸಿ ನಗುತ್ತಾ ಅವರ ದಾರಿ ಕಾದೆವು.  ನಮ್ಮೊಂದಿಗೆ ಅವರ ಚಾಪೆ, ಬರೆಯುವ ಮಣೆಯಂತಿದ್ದ ಹಲಗೆ, ಕನ್ನಡ್ಕ, ಮೇಜು, ಕುರ್ಚಿ, ಪುಸ್ತಕಗಳು, ಪಂಚೆ-ಜುಬ್ಬ, ಉಳಿದಿದ್ದ ಇನ್ನೊಂದು ಬಾಳೆಹಣ್ಣು ಅವರಿಗಾಗಿ ಕಾದವು.

ನಾವು ಹಣ್ಣು ತಿಂದು ಮುಗಿಸುವಷ್ಟರಲ್ಲಿ ಅವರು ವಾಪಸ್ಸಾದರು.  ನಮ್ಮನ್ನು ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಗಳಲ್ಲ ಎಂದು ಹೇಗೆ ಗೊತ್ತುಪಡಿಸಿಕೊಂಡರೋ ತಿಳಿಯಲಿಲ್ಲ.  ನಮ್ಮ ಪಕ್ಕದಲ್ಲಿಯೇ ಕುಳಿತು ಸರಳವಾಗಿ ವಿವರ ಪಡೆದರು.  ಉತ್ಸಾಹದಿಂದ ನಾವೂ, ಗಾಂಧೀವಾದ ಮತ್ತು ದೇವರುಗಳ ಬಗ್ಗೆ ಇದ್ದ ಪ್ರಶ್ನೆಯನ್ನು ಅವರ ಮುಂದಿಟ್ಟೆವು.  ನಮ್ಮಿಬ್ಬರನ್ನೂ ನೋಡಿ, ಒಂದು ರೀತಿಯ ವಿಷಾದದ ನಗೆ ನಕ್ಕು “ಎಲ್ಲಿದ್ದಾರೆ ಜನ? ಸಾಧ್ಯವಿಲ್ಲ” ಎಂದರು.  ಆ ’ಬೆಪ್ಪುತನ’  ಎನಿಸಲಾರಂಭಿಸಿದ ಪ್ರಶ್ನೆಗೆ ಇಷ್ಟು ಚಿಕ್ಕದಾದ ಉತ್ತರ ಪಡೆದು, ಅವರ ಕೋಣೆಯಿಂದ ಹೊರ ಬಂದಾಗ ಎರಡು ಘಂಟೆಯಾಗಿತ್ತು.  ಎಚ್ಚೆನ್ನರ ಕೋಣೆ ಕಾಲೇಜಿನ ವಿದ್ಯಾರ್ಥಿ ನಿಲಯದ ಕೆಳ ಅಂತಸ್ತಿನ ಮೂಲೆಯಲ್ಲಿತ್ತು.  ವಿದ್ಯಾರ್ಥಿಗಳು ಊಟ ಮಾಡುವ ಮನೆ, ಬಟ್ಟೆ ಒಗೆಯುವ ಕಲ್ಲು, ಸ್ನಾನಗೃಹ ಇತ್ಯಾದಿಗಳು ಅದೇ ಸಾಲಿನಲ್ಲಿದ್ದವು.  ನಾವು ಕಾಲೇಜಿನ ಮುಖ್ಯದ್ವಾರದ ಬಳಿ ಬರುವಾಗ್ಗೆ ಆ ಸರಳ ಜೀವ ವಿದ್ಯಾರ್ಥಿಗಳ ಊಟದ ಮನೆಗೆ ಹೋಗುತ್ತಿರುವುದು ಕಾಣಿಸಿತು.

ಈ ಘಟನೆ ನಡೆದು ಸುಮಾರು ಎರಡು ವರ್ಷಗಳಾಗಿತ್ತು. ಎಚೆನ್ನರಂಥ ಮತ್ತೊಬ್ಬ ಹಿರಿಯರ ಭೇಟಿ ಮಾಡುವ ಅಗತ್ಯ ಒದಗಿ ಬಂತು.  ಒಬ್ಬನೇ ಹೋಗಿ ಬರಲು ಮನಸ್ಸಾಗಲಿಲ್ಲ.  ದೂರದ ದಾವಣಗೆರೆಯಲ್ಲಿದ್ದ ಗೆಳೆಯ ಸಂದೇಶನಿಗೆ ಕಾಗದ ಬರೆದು ಜೊತೆಗಾರನಾಗಿರಲು ಆಹ್ವಾನಿಸಿದೆ.  ಸಂದೇಶನ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿದ್ದ ಕಾರಣ ಅವನು ಬೆಂಗಳೂರಿಗೆ ಬರುವುದು ಇನ್ನೂ ಒಂದು ತಿಂಗಳಾಗುತ್ತದೆಂದು ತಿಳಿಯಿತು.  ಅವರನ್ನು ಭೇಟಿ ಮಾಡುವ ಯೋಜನೆ ಮುಂದೂಡಲ್ಪಟ್ಟಿತು. ನಾನು ಅವರನ್ನು ನೋಡಲು ಹೋಗುವಂತೆಯೂ, ಹೋದಾಗ ಅವರು ತಮ್ಮ ‘ದಿವಾನ ಖಾನೆ’ ಯಲ್ಲಿ ಕುಳಿತು ಪ್ರಬಂಧ ಬರೆಯುತ್ತಿರುವಂತೆಯೂ, ನಾನು ಅವರೊಂದಿಗೆ ಮುಂಜಾವಿನ ನಡಿಗೆಗೆ ಹೋಗುವಂತೆಯೂ ಅನೇಕ ಕನಸುಗಳು ಬಿದ್ದಿದ್ದವು. ಇನ್ನೂ ಮುಂತಾದವನ್ನು ಕಲ್ಪಿಸಿಕೊಳ್ಳುತ್ತಾ ಇತರ ಚಟುವಟಿಕೆಗಳಲ್ಲಿ ತೊಡಗಿಕೊಂಡೆ.

ಸಂದೇಶ ಬೆಂಗಳೂರಿಗೆ ತಡವಾಗಿ ಬಂದ… ಆಷ್ಟುಹೊತ್ತಿಗೆ ನನ್ನ ಬಿಡುವಿನ ಸಮಯ ಮುಗಿದಿತ್ತು.  ಅವರಿಗಾಗಲೇ ನೂರು ವರ್ಷ ತುಂಬಿತ್ತು.  ಹಲವಾರು ದಿನಗಳ ನಂತರ ದಿನಪತ್ರಿಕೆಯಲ್ಲಿ “ಅಕ್ಕಿಹೆಬ್ಬಾಳು ಮೂರ್ತಿರಾವ್ ಇನ್ನಿಲ್ಲ” ಎಂದು ಓದಿದಾಗ, ತಡ ಮಾಡಿದ್ದು ಯಾರೆಂದು ಗೊತ್ತಾಯಿತು. ಇದಾಗಿ ಎರಡು ವರ್ಷಗಳಾದ ಮೇಲೆ ನನಗೆ ಪಾಠ ಮಾಡಿದ್ದ ಮೇಷ್ಟ್ರೊಬ್ಬರನ್ನು ದೂರವಾಣಿ ಮೂಲಕ ಯಾವುದೋ ಕಾರಣಕ್ಕಾಗಿ ಸಂಪರ್ಕಿಸಬೇಕಾಗಿ ಬಂತು.  ಅದೇ ದಿನ ತಾವು ಎಚ್ಚೆನ್ನರ ಕಡೆಯ ದರ್ಶನಕ್ಕಾಗಿ ಹೋಗುತ್ತಿರುವುದಾಗಿ ಅವರು ನನಗೆ ಹೇಳಿದಾಗ “ಎಲ್ಲಿದ್ದಾರೆ  ಜನ?” ಎಂಬ ಎಚ್ಚೆನ್ನರ ಮಾತು ನೆನಪಿಗೆ ಬಂತು.

One thought on “ಇಬ್ಬರ ನೆನಪು”

Please have your say

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s