ಕನ್ನಡ ಚಲನಚಿತ್ರರಂಗ: ರಾಜ್‌ಕುಮಾರ್ ನಂತರ?

Rajkumar during Gokak agitation (1980s)
Rajkumar during Gokak agitation (1980s)

ಒಳ್ಳೆಯ ಚಿತ್ರಕಥೆ, ಸಂಭಾಷಣೆ, ನಿರ್ದೇಶನವಿದ್ದ, ಯಶಸ್ಸು ಕಂಡ ಕನ್ನಡ ಚಿತ್ರಗಳ ಪಟ್ಟಿ  ಚಿಕ್ಕದೇನಲ್ಲ. ರಾಜ್‌ಕುಮಾರ್ ಅಭಿನಯದ  ನವಕೋಟಿ ನಾರಾಯಣ (1964), ಉಯ್ಯಾಲೆ  (1969), ಬಂಗಾರದ ಮನುಷ್ಯ (1972), ಬಿಡುಗಡೆ (1973), ಎರಡು ಕನಸು (1974), ಸನಾದಿ ಅಪ್ಪಣ್ಣ (1977),  ಕಾಮನ ಬಿಲ್ಲು (1983),  ಒಂದು ಮುತ್ತಿನ ಕಥೆ (1987), ದೇವತಾ ಮನುಷ್ಯ (1988); ಕಲ್ಯಾಣ್ ಕುಮಾರ್ ಅಭಿನಯದ ಬೆಳ್ಳಿ ಮೋಡ (1966), ಕಾಲೇಜು ರಂಗ (1976);   ವಿಷ್ಣುವರ್ಧನ್, ಲೋಕೇಶ್ ನಟಿಸಿದ್ದ ಭೂತಯ್ಯನ ಮಗ ಅಯ್ಯು (1974), ಸಂಕ್ರಾಂತಿ (1989), ಮುತ್ತಿನ ಹಾರ (1990); ಅನಂತ ನಾಗ್ , ಶಂಕರ್ ನಾಗ್ ಒಟ್ಟಾಗಿ ನಟಿಸಿದ್ದ ಮಿಂಚಿನ ಓಟ (1981), ಅಂಬರೀಶ್ ನಟಿಸಿದ್ದ ಏಳು ಸುತ್ತಿನ ಕೋಟೆ (1987), ಇತ್ತೀಚೆಗೆ ತೆರೆಕಂಡ ಮತದಾನ (2002), ಆ ದಿನಗಳು (2007),  ಹೀಗೆ ಕನ್ನಡ ಚಲನಚಿತ್ರಗಳು ನೆರೆಯ ರಾಜ್ಯಗಳ ಚಿತ್ರಗಳಿಗಿಂತ ಭಿನ್ನವಾಗಿ ತಮ್ಮದೇ ನೆಲೆಯನ್ನು ಕಂಡುಕೊಳ್ಳುವಲ್ಲಿ  ಯಶಸ್ವಿಯಾಗಿದ್ದವು.

ನಾನು ಬೇಕೆಂತಲೇ ಕಲಾತ್ಮಕ, ಪರ್ಯಾಯ ಚಿತ್ರಗಳನ್ನು ಇಲ್ಲಿ  ಪರಿಗಣಿಸಲಿಲ್ಲ. ಪ್ರತಿಯೊಂದು ದಶಕಕ್ಕೂ ಒಂದು ಉದಾಹರಣೆಯಂತೆ ತೆಗೆದುಕೊಂಡರೆ ನಾಂದಿ (1964), ಘಟಶ್ರಾದ್ಧ (1977),  ಆಕ್ಸಿಡೆಂಟ್ (1985), ನಾಗಮಂಡಲ (1997), ದ್ವೀಪ (2003) ದಂತಹ ಚಲನ ಚಿತ್ರಗಳು ಕನ್ನಡದಲ್ಲಿ ಬರುತ್ತಲೇ ಇವೆ (ಅವು ನಿಲ್ಲದೇ ಇರಲಿ).  ಆದರೆ, ಚಿತ್ರಕಥೆಯ ಗುಣಮಟ್ಟ ಉತ್ತಮವಾಗಿದ್ದರೂ ಸಂಕಲನ, ಛಾಯಾಗ್ರಹಣ, ಧ್ವನಿ ಗ್ರಹಣ-ಮುದ್ರಣ, ಚಿತ್ರ ತಯಾರಿಕೆಯ ಎಲ್ಲ ತಾಂತ್ರಿಕ ಅಂಶಗಳು ಸೊರಗಿ, ಆ ಸಿನೆಮಾದ ಒಟ್ಟು ಪ್ರಭಾವವನ್ನು ಕುಗ್ಗಿಸಿ,  ಸಿನೆಮಾ ಸೋಲುವುದು ಸಾಮಾನ್ಯ.  ಆದರೆ ಇತ್ತೀಚೆಗೆ ಕನ್ನಡದ  ಎಲ್ಲಾ ತೆರನಾದ (ವಾಣಿಜ್ಯ/ಪರ್ಯಾಯ) ಸಿನೆಮಾಗಳು ಹಳಸಿ ಹೋದ ಕಳಪೆ ಕಥೆಗಳು, ನಾಯಕ ವೈಭವೀಕರಣ, ಕುಲಗೆಟ್ಟ ಸಂಗೀತ, ನವಿರಿಲ್ಲದ ಹಾಸ್ಯ, ಅತಿ ನಾಟಕೀಯ ಸಂಭಾಷಣೆ ಅಥವಾ ನಟನೆಯಿಂದ ಸೊರಗಿಹೋಗಿವೆ.  ಎಲ್ಲ ಕಥೆಗಳು ಪ್ರೇಮ ಕಥೆಗಳೇ ಆದರೆ ಏನು ಗತಿ? ಗುಣಮಟ್ಟದ ಕಥೆಯೊಂದಿಗೆ ಗುಣಮಟ್ಟದ ಚಿತ್ರ ನಿರ್ಮಾಣ ಯಾಕೆ ಸಾಧ್ಯವಾಗಿಲ್ಲ?  ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸುವ ಹುಮ್ಮಸ್ಸಿರುವವರಿಗೆ ನಿರ್ಮಾತೃಗಳ ಕೊರತೆಯಿದೆ ಎಂಬ ಮಾತು ಪದೇ ಪದೇ ಕೇಳಿ ಬರುತ್ತದೆ. ಕಿತ್ತು ಹೋದ ಕಥೆಯನ್ನು ಕೇಳಿ ಹಣವನ್ನು ಸುರಿಯುವ ಇಂದಿನ ಕನ್ನಡ ಚಿತ್ರ ನಿರ್ಮಾಪಕರ ಶಂಕಿತ ಹಣದ ಹಿನ್ನೆಲೆಯೂ ಕಾರಣ ಎಂದರೆ ತಪ್ಪಲ್ಲ.  ಹುಟ್ಟಿನಿಂದಲೂ ಕನ್ನಡ ಚಿತ್ರಗಳು ತಮ್ಮ ತಾಂತ್ರಿಕ ಅಗತ್ಯಗಳಿಗಾಗಿ ಮದ್ರಾಸಿನ ಸ್ಟೂಡಿಯೋಗಳನ್ನೇ ಅವಲಂಬಿಸಿರುವುದು ಕನ್ನಡ ಚಿತ್ರಗಳ ಗುಣಮಟ್ಟದ ಕೊರತೆಗೆ ಕಾಣಿಕೆಯಿತ್ತಿದೆ (ಈಗ ಪರಿಸ್ಥಿತಿ ಸುಧಾರಿಸಿದೆ ಎಂದು ಕೇಳಿದ್ದೇನೆ).

ಕನ್ನಡದಲ್ಲಿ ಇದುವರೆಗೆ ಸಾವಿರಾರು ಚಿತ್ರಗಳು ಬಂದು ಹೋಗಿದ್ದರೂ ನಾನು ಮೇಲೆ ಹೆಸರಿಸಿದ ಚಿತ್ರಗಳು ಇಪ್ಪತ್ತಕ್ಕೂ  ಕಡಿಮೆ. ಆದರೆ ಇತ್ತೀಚೆಗೆ ಆ ಸಂಖ್ಯೆಯೂ ಇಲ್ಲವಾಗುತ್ತಿರುವುದು ಶೋಚನೀಯ.  ರಾಜ್‌ಕುಮಾರ್ ಅವರ ನಿವೃತ್ತಿಯ ನಂತರ ಕನ್ನಡದಲ್ಲಿ ಸಮಾಜ ಮುಖಿ ಕಥಾನಕವಿರುವ ಚಲನ ಚಿತ್ರಗಳ ಸಂಖ್ಯೆ ಕಡಿಮೆಯಾಗಿತ್ತಾದರೂ ಸಂಪೂರ್ಣವಾಗಿ ನಿಂತುಹೋಗಿರಲಿಲ್ಲ. ರಾಜ್ ಕುಮಾರ್ ಅವರ ಮರಣ (2006) ದೊಂದಿಗೆ ಚಿತ್ರರಂಗಕ್ಕಿದ್ದ ಬದ್ಧತೆಯೂ ಹೋಯ್ತೇನೋ ಎನ್ನಿಸಿದೆ.  ನೂರು ‘ಡಬ್ಬ-ಫಾರ್ಮುಲಾ’ ಆಧಾರಿತ ದೊಂಬಿ ಚಿತ್ರಗಳ ಮಧ್ಯೆ ಒಂದು ಸತ್ವವುಳ್ಳ ಕಥೆ ಇದ್ದರೂ ಸಾಕು ಎಂದು ಗೋಗರಿಯುವಂತಾಗಿದೆ. 

ಸೂಪರ್ ಮ್ಯಾನ್ (ಇಂಗ್ಲಿಶ್) ಚಲನಚಿತ್ರದ ನಾಲ್ಕನೆ ರೂಪಾಂತರ (2006) ಜಗತ್ತಿನಾದ್ಯಂತ ಬಿಡುಗಡೆಯಾದ ಯಶಸ್ವಿ ಚಿತ್ರ. ಸೂಪರ್ ಮ್ಯಾನ್ ಚಲನಚಿತ್ರದ ಕಥೆಯ ಎಳೆಯೊಂದು ಇಲ್ಲಿ  ಪ್ರಸ್ತುತ. “ಜಗತ್ತಿಗೆ ಸೂಪರ್ಮ್ಯಾನ್ ಯಾಕೆ ಬೇಕಿಲ್ಲ?” ಎಂಬ ಆಲೋಚನೆಯಿಂದ ಆರಂಭವಾಗುವ ಕಥೆ, ಚಿತ್ರ ಮುಗಿಯುವ ಹೊತ್ತಿಗೆ  “ಜಗತ್ತಿಗೆ ಸೂಪರ್ಮ್ಯಾನ್ ಯಾಕೆ ಬೇಕು?” ಎಂಬ ತವಕದೊಂದೊಗೆ ಕೊನೆಗೊಳ್ಳುತ್ತದೆ. ಕನ್ನಡ ಚಿತ್ರರಂಗದ ಮಟ್ಟಿಗೆ ನಟಸಾರ್ವಭೌಮ ರಾಜ್‌ಕುಮಾರ್ ನಿಜವಾಗಿಯೂ ಸೂಪರ್ ಮ್ಯಾನ್ ನಂತೆಯೇ.  ರಾಜ್‌ಕುಮಾರ್ ರ ಕನ್ನಡ ಪರ ಕಾಳಜಿ ಮತ್ತು ಅಭಿಮಾನಿಗಳ ಬಗ್ಗೆ ಅವರಿಗಿದ್ದ ಅಭಿಮಾನ ಯಾವುವೂ ಕೃತಕವಾದುದ್ದಾಗಿರಲಿಲ್ಲ. ಚಿತ್ರ ರಂಗವನ್ನು ಸಕ್ರಿಯವಾಗಿ ಗೋಕಾಕ್ ಚಳುವಳಿಯ ಬೆನ್ನಿಗೆ ನಿಲ್ಲುಸುವಲ್ಲಿ ರಾಜ್ ಕುಮಾರ್ ಅವರ ಪಾತ್ರ ಬಹಳ  ಮುಖ್ಯವಾಗಿತ್ತು. ರಾಜ್ ಕುಮಾರ್ ಅವರು ತಮ್ಮ ನಟನಾ ವೃತ್ತಿಯ ಉಚ್ಛ್ರಾಯ ಹಂತ ದಾಟಿ, ವಿಶ್ರಾಂತರಾದ  ಮೇಲೂ ಚಿತ್ರ ರಂಗದ ಮೇರು ಶಕ್ತಿಯಾಗಿ ಉಳಿದಿದ್ದರು.  ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸದಿದ್ದರೆ ಬಹುಶಃ ಅವರ ಆಯಸ್ಸು ಅಷ್ಟು ಬೇಗ  ಕ್ಷೀಣಿಸುತ್ತಿರಲಿಲ್ಲ. ಪ್ರಜಾವಾಣಿಯ ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್ ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆ ತಮ್ಮ ಅಂಕಣವೊಂದರಲ್ಲಿ ಬರೆಯುತ್ತಾ ಮುಂಗಾರು ಮಳೆ (2006) ಯಂತಹ ಅನೇಕ ಯಶಸ್ವೀ ಚಿತ್ರಗಳ ನಂತರವೂ ಕನ್ನಡ ಚಿತ್ರರಂಗ ರಾಜ್‌ಕುಮಾರ್ ಅವರಂತಹ ಪ್ರಭಾವಿ ವ್ಯಕ್ತಿತ್ವವನ್ನು ಮತ್ತೆ ಯಾಕೆ ಪಡೆದುಕೊಳ್ಳಲಾಗುತ್ತಿಲ್ಲ ಎಂಬ ಜಿಜ್ಞಾಸೆ ವ್ಯಕ್ತಪಡಿಸಿದ್ದರು. ಈ ಲೇಖನದ ಆರಂಭದಲ್ಲಿ ರಾಜ್‌ಕುಮಾರ್ ನಮಗೆ ಏಕೆ ಬೇಕಿಲ್ಲ ಎಂದು ಕೇಳಿ, ಲೇಖನವನ್ನು ಬೆಳೆಸಿ ನಿಧಾನವಾಗಿ ಜ್ಞಾನೋದಯವಾಗುವ ಅಗತ್ಯ ಇಲ್ಲಿಲ್ಲ. ಚಿತ್ರ ರಂಗ ಹಿಡಿದಿರುವ ದಾರಿಯನ್ನು ನೋಡಿದರೆ ಖಂಡಿತವಾಗಿಯೂ “ರಾಜ್‌ಕುಮಾರ್ ತನ” ತನಗೆ ಬೇಡ ಎಂದು ಅದು ನಿರ್ಧರಿಸಿದಂತಿದೆ. ಕನ್ನಡಕ್ಕೆ ರಾಜ್‌ಕುಮಾರ್ ಅವರಂಥ ಇನ್ನೊಬ್ಬ ನಟನ ಅಗತ್ಯ ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿ  ಕಾಣುತ್ತಿದೆ. ನೇರವಾಗಿ ಕನ್ನಡ ಚಿತ್ರರಂಗಕ್ಕೆ, ಕನ್ನಡಕ್ಕೆ ರಾಜ್‌ಕುಮಾರ್ ಯಾಕೆ ಮತ್ತೆ ಬೇಕು?  ಎಂದು ಕೇಳಿದರೆ, ಆ ಸ್ಥಾನವನ್ನು ತುಂಬುವ ಭರವಸೆ ಯಾರಾದರೂ ತೋರಿಸಿದ್ದಾರೆಯೇ?  ಎಂಬ ಮರುಪ್ರಶ್ನೆ ನಮ್ಮನ್ನು ಕಾಡುತ್ತದೆ.  ಉತ್ತರಗಳಿಲ್ಲ.

ಕನ್ನಡ ಚಿತ್ರರಂಗದ ಇಂದಿನ ಪರಿಸ್ಥಿತಿ ನೋಡಿದ್ದರೆ ರಾಜ್ ಕುಮಾರ್ ಅವರು ಹೀಗೆ ಪ್ರತಿಕ್ರಿಯಿಸುತ್ತಿದ್ದರೇನೋ?
ಕನ್ನಡ ಚಿತ್ರರಂಗದ ಇಂದಿನ ಪರಿಸ್ಥಿತಿ ನೋಡಿದ್ದರೆ ರಾಜ್ ಕುಮಾರ್ ಅವರು ಹೀಗೆ ಪ್ರತಿಕ್ರಿಯಿಸುತ್ತಿದ್ದರೇನೋ?