you're reading...
Kannada, People, Reflections

ಮದ್ದೂರ್ವಡೆ ಮತ್ತು ಅವಳು

Bangalore-Maddur-Mysoreಬಹಳ ವರ್ಷಗಳು ಕಾದ ಮೇಲೆ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಹೋಗುವ ಅವಕಾಶ ಸಿಕ್ಕಿತ್ತು. ಸೆಕೆಂಡ್ ಕ್ಲಾಸ್ ಸೀಟರ್ ಟಿಕೆಟ್ ಜೇಬಿನಲ್ಲಿತ್ತು. ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಪ್ಲ್ಯಾಟ್-ಫಾರ್ಮ್ನಲ್ಲಿ ರೈಲು ಬರುವುದನ್ನೇ ಕಾಯುತ್ತಾ ನಿಂತಿದ್ದೆ.   ಹತ್ತು ಅಡಿ ದೂರದಲ್ಲಿ ಹುಡುಗಿಯೊಬ್ಬಳು ನನ್ನಂತೆಯೇ ಮತ್ತೆ ಮತ್ತೆ ಕತ್ತೆತ್ತಿ ರೈಲು ಬರುವ ದಿಕ್ಕನ್ನೇ ನೋಡುತ್ತಾ ಇದ್ದಳು. ನನ್ನನ್ನು ನೋಡಿ ಮುಗುಳ್ನಕ್ಕಳು. ನಾನೂ ಕೈ ಬೀಸಿ ನಕ್ಕಿದ್ದ ನೆನಪು. ರೈಲು ಬಂತು. ನನ್ನ ಬೋಗಿ ಎಲ್ಲಿ ಎಂಬ ಕುತೂಹಲ, ಗಲಿಬಿಲಿಯ ಮಧ್ಯೆ ಅವಳು ಯಾವ ಬೋಗಿ ಹತ್ತಿದಳೋ ಗೊತ್ತಾಗಲಿಲ್ಲ. ನನ್ನ ಜಾಗ ಕಿಟಕಿಯ ಪಕ್ಕದಲ್ಲೇ ಇತ್ತು. ಕಿಟಕಿಯ ಸರಳುಗಳ ಮಧ್ಯೆ ಕೈ ತೂರಿಸಿ ಹೊರಗಿನಿಂದ ಅರ್ಧ ಮುಚ್ಚಿದ್ದ ಬಾಗಿಲನ್ನು ಪೂರ್ತಿ ಮೇಲಕ್ಕೆತ್ತಿದೆ. ರೈಲು ಹೊರಡುವುದೇ ಬಾಕಿ. ನಾನು ಪ್ಲ್ಯಾಟ್ ಫಾರ್ಮ್ನಲ್ಲಿ ನೋಡಿದ್ದ ಹುಡುಗಿ ನಸುನಗುತ್ತ ನನ್ನ ಮುಂದೆ ಬಂದಳು. ಅವಳು ಬಂದ ತಕ್ಷಣ ನನ್ನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಯಾರೋ ಅಜ್ಜ-ಅಜ್ಜಿ ತಾವಾಗಿಯೇ ಜರುಗಿ ಕಿಟಕಿಯ ಪಕ್ಕ (ನನ್ನ ಎದುರಿನ) ಸೀಟಿನಲ್ಲಿ ಅವಳಿಗೆ ಜಾಗ ಮಾಡಿಕೊಟ್ಟರು. ನಾನೂ “ಬಹಳ ಒಳ್ಳೆಯವರು ಈ ಅಜ್ಜ-ಅಜ್ಜಿ, ಎಷ್ಟು ಚೆನ್ನಾಗಿ ಎಲ್ಲಾ ಅರ್ಥ ಮಾಡ್ಕೊತಾರೆ” ಎಂದು ಖುಶಿ ಪಡುತ್ತಾ ನಕ್ಕೆ, ಆ ಹುಡುಗಿ ನನ್ನನ್ನು ನೋಡುತ್ತ ಮತ್ತೆ ನಕ್ಕಳು. ರೈಲು ಹೊರಟಿತು.

ಸುಮಾರು ಹತ್ತು ಹದಿನೈದು ನಿಮಿಷಗಳಾಗಿರಬಹುದು.   ಅವಳು ತನ್ನ ಚೀಲದಿಂದ ಪುಸ್ತಕವೊಂದನ್ನು ತೆಗೆದು ರಹಸ್ಯವಾಗಿ ಏನನ್ನೋ ಬರೆದು, ತನ್ನ ಬಟ್ಟೆಯಲ್ಲಿ ಅದನ್ನು ಮುಚ್ಚಿಟ್ಟುಕೊಂಡು ಮೆಲ್ಲಗೆ ಹಾಳೆ ಹರಿದು, ಚಿಂದಿ ಮಾಡಿ ತನ್ನ ಕಾಲಿನ ಹತ್ತಿರ ಬೀಳಿಸಿಕೊಂಡು ಅದನ್ನು ನನ್ನತ್ತ ಒದ್ದಳು. ನಾನೂ ಕಾಲು ನವೆಯಾಯ್ತೇನೋ ಎಂಬಂತೆ ಬಗ್ಗಿ ಕೆರೆದು ಕೊಳ್ಳುವ ನೆಪದಲ್ಲಿ ಆ ಚಿಂದಿ ಹಾಳೆಯನ್ನು ಎತ್ತಿಕೊಂಡೆ. ಅದರಲ್ಲಿ “ನಾವು ಶಬ್ದ ಮಾಡಿದ್ರೆ ಪಕ್ಕದಲ್ಲಿರೋರೆಲ್ಲ ಏನಾದರೂ ಅಂತಾರೆ. ಡಂಬ್ ಷರಾಡ್ ಆಡೋಣ್ವಾ? ಉತ್ತರ ಬರೆದು ಕಳ್ಸು” ಅಂತ ಬರೆದಿದ್ಲು.   ನಾನು ಪೆನ್ನಿದೆ, ಹಾಳೆಯಿಲ್ಲ ಅಂತ ಸನ್ನೆ ಮಾಡ್ದೆ. ಅವಳು ತನ್ನ ಪಕ್ಕ ತಿರುಗಿ ಯಾರಾದರೂ ನೋಡುತ್ತಿದ್ದಾರೆಯೇ ಎಂದು ಪರೀಕ್ಷಿಸಿದಾಗ ಪಕ್ಕದಲ್ಲಿದ್ದ ಅಜ್ಜ-ಅಜ್ಜಿ ಅವಳನ್ನು ನೋಡಿ ನಕ್ಕರು. ಅವಳು ಮಳೆಬಿಲ್ಲಿನಂತೆ ಬಾಗಿ, ನಾಚಿ ಮುದ್ದೆಯಾದಳು. ಇನ್ನೇನು ರಹಸ್ಯ ಎಂದು ಅವಳು ತನ್ನ ಪುಸ್ತಕದಿಂದ ನಾಲ್ಕಾರು ಹಾಳೆಗಳನ್ನು ಹರಿದು ನನಗೆ ಕೊಟ್ಟಳು. ನಮ್ಮ ಕಣ್ಣಾ ಮುಚ್ಚಾಲೆ ಆಟ ಶುರುವಾಯ್ತು. ಅವಳು ತನ್ನ ಬೆರಳುಗಳನ್ನು ಕಲಾತ್ಮಕವಾಗಿ ಮಡಿಸಿ ತೋರಿಸುತ್ತಿದ್ದ ಅನೇಕ ಪ್ರಾಣಿ-ಪಕ್ಷಿಗಳ ಭಾವಗಳನ್ನು ನೋಡಿ ನಾನು ಬೆರಗಾಗಿ ಹೋದೆ. ಇವಳೆಲ್ಲೋ ಭರತ ನಾಟ್ಯ ಕಲಿತಿರಬೇಕು ಎಂದುಕೊಂಡೆ. ನಮ್ಮ ಈ ಊಹಿಸುವ ಆಟಕ್ಕೆ ವಿರಾಮ ಸಿಕ್ಕಿದ್ದು ರೈಲಿನ ಕಿಟಕಿಯ ಪಕ್ಕಘಮ ಘಮ ಎಂದು ಮದ್ದೂರ್ವಡೆ ಬಂದಾಗಲೇ. ನನ್ನ ಗಮನ ಕಿಟಕಿಯ ಕಡೆಗೆ ಹೊರಳಿ ಜೇಬಿನಲ್ಲಿದ್ದ ಚಿಲ್ಲರೆ ಹುಡುಕುತ್ತಿರುವಾಗ ಪಕ್ಕದಲ್ಲಿ ಕುಳಿತಿದ್ದವರು “ನಾ ಕೊಡ್ತೀನಿ ಬಿಡೋ” ಎಂದರು. ಆಗಲೇ ನನ್ನೊಂದಿಗೆ ಮೈಸೂರಿಗೆ ನನ್ನ ದೊಡ್ಡಪ್ಪ ಮತ್ತು ದೊಡ್ಡಮ್ಮ ಕೂಡ ಬರುತ್ತಿದ್ದಾರೆ ಎಂದು ನೆನಪಾಗಿದ್ದು.

“ನನ್ನ ಮುಂದೆ ಕುಳಿತಿದ್ದ ಚೆಲುವೆಗೂ ಮದ್ದೂರು ವಡೆ ಕೊಳ್ಳಬೇಕೆಂಬ ನನ್ನ ಆಸೆಯನ್ನು ದೊಡ್ಡಪ್ಪನಿಗೆ ಹೇಗೆ ಹೇಳಲಿ? ನಾನೇ ದುಡ್ಡು ಕೊಟ್ಟಿದ್ದರೆ ಚೆನ್ನಿತ್ತು” ಎಂದುಕೊಳ್ಳುತ್ತಾ ಇರುವಾಗ, ಅವಳೂ ದುಡ್ದು ಕೊಟ್ಟು ಅದನ್ನೇ ಕೊಳ್ಳುತ್ತಿರುವುದು ಕಾಣಿಸಿತು. “ಸರಿ, ಇನ್ನೇನು ಬಿಡು” ಎಂದು ನನಗೆ ನಾನೇ ಹೇಳಿಕೊಂಡು, ವಡೆಯ ಮೆಲ್ಲುತ್ತ ಕಿಟಕಿಯ ಆಚೆ ಇಣುಕುತ್ತಾ ಕುಳಿತಿದ್ದೆ. ರೈಲು ಮತ್ತೆ ಹೊರಟಿತು. ಮದ್ದೂರ್ವಡೆಯೂ ಖಾಲಿ. ಪುನಃ ಮುಂದೆ ಕುಳಿತವಳ ಕಡೆ ಗಮನ ಹರಿಯಿತು. ಮಾತಿಲ್ಲದೆ ಆಡಿದ್ದು ಸಾಕೆನಿಸಿ, ಅವಳನ್ನು ಪ್ರಶ್ನೆ ಕೇಳಿದೆ. “ನಿನ್ನ ಹೆಸರೇನು?”. ಅವಳು ನನ್ನನ್ನು ನೋಡುತ್ತಾ ಮತ್ತೆ ನಕ್ಕಳು. “ಹೆಸರು ಹೇಳು” ಎಂದು ಮತ್ತೊಮ್ಮೆ ಕೇಳಿದೆ. ಅವಳು ಮತ್ತೆ ನಕ್ಕಳು. ಅವಳ ಪಕ್ಕದಲ್ಲಿ ಕುಳಿತಿದ್ದ ಅಜ್ಜ ನನ್ನನ್ನು ನೋಡಿ “ನನ್ನ ಮೊಮ್ಮಗಳಪ್ಪ. ಅವಳಿಗೆ ಕಿವಿ ಕೇಳಲ್ಲ. ಮಾತೂ ಬರಲ್ಲ” ಅಂದು ಬಿಟ್ಟರು. ನನಗೂ ಒಂದು ಕ್ಷಣ ಮಾತೇ ಮರೆತುಹೋಯ್ತು.

ನನ್ನತ್ತ ಸನ್ನೆ ಮಾಡಿ ತನ್ನ ಮೊಮ್ಮಗಳಿಗೆ ಅಜ್ಜ ಏನೋ ತೋರಿಸಿದರು. ಅವಳು ಒಂದು ಕ್ಷಣ ಮಂಕಾದಳು. ಆದರೆ ಸ್ವಲ್ಪದರಲ್ಲೇ ಸರಿ ಮಾಡಿಕೊಂಡು ಅಜ್ಜನಿಗೆ ಏನನ್ನೋ ಸನ್ನೆ ಮಾಡುತ್ತಾ ಹೇಳಿದಳು. ಅಜ್ಜ ನನಗೆ ಮತ್ತೆ “ನಿನಗೆ ಸನ್ನೆ ಮಾತು ಹೇಳಿ ಕೊಡ್ತಾಳಂತೆ. ಕಲಿತುಕೊಳ್ತೀಯ?” ಎಂದು ಕೇಳಿದರು. ನಾನು ಸಂತೋಷದಿಂದ “ಓ” ಎಂದೆ. ಮೈಸೂರು ಬರುವವರೆಗೂ ಕೈ ಸನ್ನೆಯ ಭಾಷೆಯ ನಾಲ್ಕಾರು ಶಬ್ದಗಳನ್ನು ಹೇಳಿಕೊಟ್ಟಳು. ಮೈಸೂರು ಬಂತು. ನಾನು ನನ್ನ ದೊಡ್ಡಪ್ಪ-ದೊಡ್ಡಮ್ಮನೊಂದಿಗೆ ರೈಲಿನಿದ ಇಳಿದೆ. ಅವಳು ಯಾವ ಕಡೆ ಹೋದಳೋ ತಿಳಿಯಲಿಲ್ಲ.

ಸುಮಾರು ಹನ್ನೆರಡು ವರ್ಷ ವಯಸ್ಸಿನ ಹುಡುಗ ಮತ್ತು ಹುಡುಗಿಗೆ “ಅವಳಿಗೆ ಅವನು ಮತ್ತೆ ಸಿಗನು, ಅವನಿಗೆ ಅವಳು ಮತ್ತೆ ಸಿಗಳು” ಎಂಬ ಯೋಚನೆ ಇರಲಿಲ್ಲ. ಮೊಟ್ಟ ಮೊದಲ ಬಾರಿಗೆ ರೈಲು ಪ್ರಯಾಣ ಮಾಡಿದ ನನ್ನ ಆ ಅನುಭವವನ್ನು ಶ್ರೀಮಂತಗೊಳಿಸಿದ ಆ ಜಾಣೆಯ ನೆನಪು ಮಾತ್ರ ಇಂದಿಗೂ ಇದೆ.

Advertisements

About CanTHeeRava

I am CanTHeeRava (ಶ್ರೀಕಣ್ಠ ದಾನಪ್ಪಯ್ಯ) from Bangalore (ಬೆಂಗಳೂರು), INDIA. Areas of my training and interests include Sciences, Indian Classical (Carnatic) Music, Languages, Poetry (Kannada and English), Test Cricket, and Educational & Political Reform

Discussion

One thought on “ಮದ್ದೂರ್ವಡೆ ಮತ್ತು ಅವಳು

  1. Ella ok… ivaaga ee kathe yaake? 😉

    Posted by padmalekha | ಜೂನ್ 3, 2014, 20:34

Please have your say

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

ಹಳೆಯ ಕಡತಗಳು / Archives

ಬೇರುಗಳು

ಇತ್ತೀಚಿನ ಲೇಖನಗಳು

%d bloggers like this: