ಭಾರತೀಯ ದೃಷ್ಟಿ ಮತ್ತು ಸಾವು

ಇತ್ತೀಚೆಗೆ ಒಮ್ಮೆ ಫೇಸ್ಬುಕ್ಕಿನಲ್ಲಿ ನನಗೆ ಗೊತ್ತಿರುವ ವೈದ್ಯರೊಬ್ಬರು ಭಾರತೀಯ ವೈದ್ಯರ ಮೇಲೆ ಹೆಚ್ಚುತ್ತಿರುವ ಒತ್ತಡಗಳ ಬಗ್ಗೆ ಬರೆದಿದ್ದರು.  ಭಾರತೀಯ ರೋಗಿಗಳ ಸಂಬಂಧಿಕರು ಹೇಗೆ ವೈದ್ಯರಿಂದ ಅಸಾಧ್ಯವಾದ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ ಎಂಬುದು ಅವರ ತುಣುಕು ಬರಹದ ಸಾರ.  ಇಲ್ಲಿ ಆ ಅಸಾಧ್ಯವಾದ ನಿರೀಕ್ಷೆಗಳು ಭಾರತೀಯ ರೋಗಿಗಳ ಸಂಬಂಧಿಕರದ್ದು, ಭಾರತೀಯ ರೋಗಿಗಳದ್ದಲ್ಲ ಎಂಬುದು ಮುಖ್ಯವಾದ ವಿಚಾರ.   ನಾನು ಅವರ ತುಣುಕು ಬರಹಕ್ಕೆ ಉತ್ತರವಾಗಿ “ಭಾರತೀಯರಲ್ಲಿ ಅವರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳ ಒಲವಿನ ಹೊರತಾಗಿಯೂ ಸಾವು ಎಂದರೆ ಏನು ಎಂಬ ಅರಿವು ಇನ್ನೂ ಇಲ್ಲ” ಎಂದು ಬರೆದಿದ್ದೆ.  ತುಂಬಾ ಯೋಚಿಸಿದ ಮೇಲೆ ನನ್ನ ಆ ಹೇಳಿಕೆಗೆ ಒಂದು ಸಣ್ಣ ತಿದ್ದುಪಡಿ ಮಾಡಬೇಕು ಎನಿಸಿದೆ.  ಭಾರತೀಯರಲ್ಲಿ ರೋಗಿಗಳಿಗೆ (ನಿಜವಾಗಿಯೂ ಸಾವಿನ ಹತ್ತಿರ ಇರುವವರಿಗೆ) ಸಾವಿನ ಬಗ್ಗೆ ಇರುವ ದೃಷ್ಟಿಗೂ, ಆ ರೋಗಿಗಳ ಸಂಬಂಧಿಕರು ಸಾವನ್ನು ನೋಡುವ ದೃಷ್ಟಿಗೂ ಸಾಕಷ್ಟು ವ್ಯತ್ಯಾಸ ಇದೆ ಎಂದು ಹೇಳಿದರೆ ಹೆಚ್ಚು ಸಮರ್ಪಕ ಅನ್ನಿಸುತ್ತದೆ.

ಭಾರತದಲ್ಲಿ ರೈತರ ಆತ್ಮಹತ್ಯೆ ಸುದ್ದಿ ಮಾಡದ ದಿನ ಅಪರೂಪವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಈ ಪ್ರಬಂಧ ಬರೆಯುವ ಧೈರ್ಯ ಮಾಡುತ್ತಿದ್ದೇನೆ.  ರೈತರ ಆತ್ಮಹತ್ಯೆಯಂಥ ಗಂಭೀರವಾದ ವಿಷಯವನ್ನು ಉದಾಹರಣೆಯಾಗಿಟ್ಟುಕೊಂಡು ವಿಶಾಲವಾದ ಹಿನ್ನೆಲೆಯಲ್ಲಿ ಮನುಷ್ಯನ ಸಾವು ಮತ್ತು ಸಾವಿನ ಸುತ್ತಲ ಗೋಜಲುಗಳನ್ನು ಭಾರತೀಯ ದೃಷ್ಟಿಯಿಂದ ಚರ್ಚಿಸುವ ಉದ್ದೇಶ ನನ್ನದು.  ಭಾರತೀಯ ದೃಷ್ಟಿ ಎಂದರೇನು? ಎಂದು ಮೊದಲಿಗೆ ಹೇಳಬೇಕಾಗಿದೆ.  ಅದನ್ನು ಪದಗಳಲ್ಲಿ ಹಿಡಿಯುವುದು ಕಷ್ಟದ ವಿಚಾರ.  ಆದರೂ ಪ್ರಯತ್ನ ಮಾಡುತ್ತೇನೆ.  ಮೂಲತಃ ರಾಜಾಡಳಿತ (ಫ್ಯೂಡಲ್ ಸಿಸ್ಟಮ್) ವನ್ನು ಒಪ್ಪುವ ಮನಸ್ಥಿತಿಯುಳ್ಳ, ಹಲವು ಭಾಷೆಗಳ ಪ್ರಭಾವಕ್ಕೊಳಪಟ್ಟು, ಆ ಭಾಷೆಗಳ ಸಹಾಯದಿಂದ ಆಕಾರ ಪಡೆದ ಹಲವು ಬಗೆಯ ಸಂಗೀತ, ಕಲೆಗಳ ಜಾಲದಲ್ಲಿರುವ,  ಪ್ರಕೃತಿಯ ಶಕ್ತಿಗೆ ಹೆದರುವ ಆದರೆ ಸುಲಭವಾಗಿ ಅದನ್ನು ಮರೆಯುವ, ಸ್ವಹಿತ ಕಾಪಾಡಿಕೊಳ್ಳುವ ಸಲುವಾಗಿ ಸೃಷ್ಟಿಸಿಕೊಂಡ ಹಲವು ಧಾರ್ಮಿಕ ದೇವರುಗಳ ನಡುವೆ ಆ ದೇವರುಗಳನ್ನು ಬೇಕಾದಾಗ ನಂಬಿ ಅಥವಾ ಬೇಡದಿದ್ದಾಗ ನಂಬದೆಯೇ ಮನುಷ್ಯ ಸ್ಥಿತಿಯನ್ನು ಅನುಭವಿಸುವುದು ಭಾರತೀಯ ದೃಷ್ಟಿ ಎನ್ನಬಹುದೇನೋ.  ದೃಷ್ಟಿ ಎಂಬುದು ಕೇವಲ ಕಣ್ಣಿಗೆ ಸಂಬಂಧಿಸಿದುದಲ್ಲ.  ಅದು ಎಲ್ಲ ರೀತಿಯ ಅನುಭವಗಳನ್ನು ಅಂತರ್ಗತಗೊಳಿಸಿಕೊಂಡ ಮೇಲೆ ನಮ್ಮಲ್ಲಿ ಮೂಡುವ ಪ್ರಪಂಚ ಪ್ರಜ್ಞೆ ಎಂದರೂ ಸರಿಯೇ.  ನೋಟಕ್ಕೆ ನಮ್ಮಲ್ಲಿ ಮೊದಲಿಂದಲೂ ಹೆಚ್ಚಿನ ಮಹತ್ವ ಇರುವ ಕಾರಣ ಅದನ್ನೂ ಭಾರತೀಯ ದೃಷ್ಟಿಯ ಒಂದು ಗುಣವೆಂದು ಹೇಳಬಹುದು.  ಅಂದರೆ, ಭಾರತೀಯ ದೃಷ್ಟಿಯಲ್ಲಿ ವಸ್ತುಸ್ಥಿತಿಯ ಅಂತಃಸತ್ವಕ್ಕಿಂತ ಅದು ಹೊರಗಣ್ಣಿಗೆ ಹೇಗೆ ಕಾಣುವುದು ಅಥವಾ ಕಾಣಿಸಿಕೊಳ್ಳುವ ಹಲವು ರೀತಿಗಳು ಹೆಚ್ಚಿನ ಪಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.   ನನ್ನ ಈ ವಿವರಣೆ ಜಗತ್ತಿನ ಅನೇಕ ನಾಗರಿಕತೆಗಳ ದೃಷ್ಟಿಗೂ ಅಥವಾ ಯಾವುದೇ ಮನುಷ್ಯ ಕುಲದ ದೃಷ್ಟಿಗೂ ಅನ್ವಯವಾಗಬಹುದು.  ಆದರೆ, ಒಬ್ಬ ಭಾರತೀಯನಾಗಿ ನಾನು ನನ್ನ (ನಮ್ಮ?) ದೃಷ್ಟಿಯ ಬಗ್ಗೆಯಷ್ಟೇ ಅಧಿಕೃತವಾಗಿ ಹೇಳಬಲ್ಲೆ.

ನಾನು ರೈತರ ಆತ್ಮಹತ್ಯೆಯ ವಿಚಾರವನ್ನು ಮನಸ್ಸಿಗೆ ತಂದುಕೊಂಡಾಗಲೆಲ್ಲಾ ಭಾರತದಲ್ಲಿ ಎಷ್ಟೊಂದು ಜನ ಎಷ್ಟೊಂದು ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರಲ್ಲಾ ಎಂಬ ಯೋಚನೆ ಬಂದಿದ್ದಿದೆ.  ನಾನು ಅಂಕಿ ಅಂಶ ತಜ್ಞ ವಿಶ್ಲೇಷಕನಲ್ಲ.  ಆದರೆ, ಅನೇಕ ತಜ್ಞ ವಿಶ್ಲೇಷಕರೂ ಅದೇ ಧಾಟಿಯಲ್ಲಿ ರೈತರ ಆತ್ಮಹತ್ಯೆಯನ್ನು ಅಂಕಿಸಂಖ್ಯೆಯಾಗಿ ನೋಡಿದ್ದಿದೆ.  ಭಾರತದಲ್ಲಿ ರಸ್ತೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಗಿಂತ ಹೆಚ್ಚು.  ರಸ್ತೆ ಅಪಘಾತಗಳಿಗೆ ಅನೇಕ ಕಾರಣಗಳಿರಬಹುದು.  ಅಜಾಗರೂಕ ವಾಹನಚಾಲನೆ, ಕುಡಿತದ ಅಮಲು, ಕೆಟ್ಟ ರಸ್ತೆ, ಅಸಮರ್ಪಕ ವಾಹನ ಪಾಲನೆ,  ನಿಗದಿ ಮೀರಿದ ಸಂಖ್ಯೆಯಲ್ಲಿ ಜನಗಳನ್ನು ತುಂಬಿಕೊಳ್ಳುವ ಸಾರ್ವಜನಿಕ ವಾಹನಗಳು,  ಹಣದ ಮದ, ಕೊಬ್ಬಿದ ಚಾಲಕ ಮತ್ತು ಅತಿವೇಗದ ಕಾರು… ಇಂತಹ ಯಾವುದೇ ಕಾರಣ ಇದ್ದರೂ ರಸ್ತೆ ಅಪಘಾತಗಳನ್ನು ಯಾರೂ ಬೇಕೆಂತಲೇ ಮಾಡುವುದಿಲ್ಲ.  ಹಾಗೆ ಮಾಡಿದ ಕೆಲ ಸಂದರ್ಭಗಳಲ್ಲಿ ರಸ್ತೆ ಅಪಘಾತಗಳು ಕೊಲೆಯಾಗಿ ಬದಲಾಗುತ್ತವೆ.  ಭಾರತದಲ್ಲಿ ಅನೇಕ ಕೊಲೆಗಳೂ ನಡೆಯುತ್ತವೆ. ಕೊಲೆ ಅಪರಾಧ.  ಆದರೆ ಆತ್ಮಹತ್ಯೆ ಹಾಗಲ್ಲ.  ಆತ್ಮಹತ್ಯೆಯಲ್ಲಿ ಕೊಲೆಮಾಡಿದವನಿಗೆ ಶಿಕ್ಷೆ ಕೊಡಲು ಸಾಧ್ಯವಿಲ್ಲ.

ಆತ್ಮಹತ್ಯೆಗೆ ಅನೇಕ ಕಾರಣಗಳಿರಬಹುದು. ಎಲ್ಲಾ ಕಾರಣಗಳನ್ನು ಮಾನಸಿಕ ಕ್ಲೇಶೆ ಎಂಬ ಒಂದು ಕಾರಣದೊಳಗೆ ತಂದು ನಿಲ್ಲಿಸಬಹುದೇನೋ.  ಎಲ್ಲರೂ ಯಾವುದಾದರೊಂದು ಕಾರಣಕ್ಕೆ ಮಾನಸಿಕ ಕ್ಲೇಶೆಗೆ ಒಳಗಾಗುತ್ತಲೇ ಇರುತ್ತಾರೆ.  ಅವರ್ಯಾರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.  ಮಾನಸಿಕ ಕ್ಲೇಶೆ ತೀವ್ರ ಸ್ವರೂಪ ಪಡೆದು ಖಿನ್ನತೆಗೆ ಒಳಗಾದವರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.  ಆಸ್ಪತ್ರೆಯಲ್ಲಿ ಯಾರಾದರೂ ತೀವ್ರತೆರನಾದ ಅಸ್ವಸ್ಥತೆಯಿಂದ ಬಳಲುತ್ತಿದ್ದರೆ ಅವರು ಕೊನೆಯುಸಿರೆಳೆಯುವ ಸಾಧ್ಯತೆ ಇದೆ ಎಂದು ಗೊತ್ತಾದರೆ, ಸಂಬಂಧಪಟ್ಟವರೆಲ್ಲರೂ ಮಾನಸಿಕವಾಗಿ ಎಲ್ಲಕ್ಕೂ ಸಿದ್ಧವಾಗಲು ಕಾಲಾವಕಾಶ ಇರುತ್ತದೆ.  ಆದರೆ ಈ ಮಾನಸಿಕ ಕ್ಲೇಶೆಗಳು ಏಟು ಕೊಡುವುದು ಯಾರಿಗೂ ಗೊತ್ತಾಗುವುದಿಲ್ಲ.  ಏಟು ತಿನ್ನುತ್ತಿರುವವರಿಗೂ ಎಷ್ಟೋ ಬಾರಿ ಗೊತ್ತಾಗದೇ ಹೋದಾಗ ಅವರು ಆತ್ಮಹತ್ಯೆಗೆ ಕೈ ಹಾಕುವರೇನೋ.

ಯೂರೋಪಿನ ಅನೇಕ ದೇಶಗಳಲ್ಲಿ ಜನರು ತಾವು ಜೀವಂತವಿರುವಾಗಲೇ, ಮಾನಸಿಕವಾಗಿ, ಆರ್ಥಿಕವಾಗಿ, ದೈಹಿಕವಾಗಿ ಶಕ್ತರಾಗಿರುವಾಗಲೇ, ತಮ್ಮ ಸಾವಿನ ಬಗ್ಗೆ ವಿಶೇಷ ಉಯಿಲು ಬರೆಯುವ ಪದ್ಧತಿ ಇದೆ.  ಈ ವಿಶೇಷವಾದ ಉಯಿಲು ಆಸ್ತಿ ವಿಲೇವಾರಿಯ ಉಯಿಲಲ್ಲ.  “ತಾವು ಮಾನಸಿಕವಾಗಿ ಮತ್ತು/ಅಥವಾ ದೈಹಿಕವಾಗಿ ಸಂಪೂರ್ಣವಾಗಿ ಪರಾವಲಂಬಿಗಳಾಗುವ ಪರಿಸ್ಥಿತಿ ಎಂದಾದರೂ ಬಂದರೆ ಆಗ ತಮ್ಮನ್ನು ಕೃತಕವಾದ (ನೋವಿಲ್ಲದ) ವಿಧಾನದಿಂದ ಸಾವನ್ನಪ್ಪುವಂತೆ ಮಾಡಿ” ಎಂದು ಆಪ್ತೇಷ್ಟರಿಗೆ ಅಧಿಕಾರ ಕೊಡುವ ವಿಶೇಷ ಉಯಿಲು ಅದು.   ಅದಕ್ಕೆ ಕಾನೂನಿನ ಮತ್ತು ವೈದ್ಯರ ಅನುಮತಿ, ಉಪಸ್ಥಿತಿ, ಮತ್ತು ಸಹಕಾರವನ್ನೂ ಕೊಡಲಾಗುತ್ತದೆ.  ಆ ದೇಶಗಳ ಜನರು Farmer suicide_graphic ಸಾವು ಎಂಬ ಗಂಭೀರವಾದ ಸವಾಲನ್ನು ಎದುರಿಸುವ ವಿಧಾನ ಅದ್ಭುತವಾದುದು.  ನಮ್ಮಲ್ಲಿ (ಭಾರತದಲ್ಲಿ) ಸಾಯುವವನ ಹೊರತಾಗಿ ಬೇರಾರಿಗೂ ಅದರ ಆಳದ ಅರಿವು ಇದ್ದಂತೆ ನನಗೆ ತೋರುವುದಿಲ್ಲ.  ನೀವು ಮತ್ತು ನಾನು ನಮ್ಮಲ್ಲಿನ ಅನೇಕ ಹಿರಿಯ ಜೀವಗಳು (೮೦ ಅಥವಾ ೯೦ ವರ್ಷ ದಾಟಿದವರು) ವಯೋಧರ್ಮಕ್ಕನುಗುಣವಾಗಿ ಸಹಜ ಸಾವಿಗೆ ಶರಣಾಗುವುದನ್ನು ನೋಡಿದ್ದೇವೆ.  ಅಂತಹ ಸಂದರ್ಭದಲ್ಲಿ ಮೃತ ಭಾರತೀಯರ ಸಂಬಂಧಿಕರೂ ಯಾವ ಉತ್ಪ್ರೇಕ್ಷೆಗಳಿಲ್ಲದೆ ನಡೆದುಕೊಂಡಿರುವದನ್ನೂ ನಾವು ನೋಡಿದ್ದೇವೆ.  ಆದರೆ, ಸಾವಿಗೆ ಮುಂಚೆ ಭಾರತೀಯರಿಗೆ ಆ ವಿಚಾರವಾಗಿ ಯೋಚಿಸಲು ಬರುವುದಿಲ್ಲ.  ಅಮಂಗಳದ ಮಾತು, ಅಪಶಕುನದ ಮಾತು ಇತ್ಯಾದಿಯಾಗಿ ಅದನ್ನು ವಿಂಗಡಿಸಿ ದೂರವೇ ಉಳಿದುಬಿಡುತ್ತಾರೆ.

ನನ್ನ ಪ್ರಕಾರ ಸಾವಿನ ವಿಚಾರಗಳನ್ನು ಶಕ್ತರಾಗಿ ಎದುರಿಸಬೇಕಾದರೆ ಅವೆಲ್ಲವನ್ನೂ ಮುಕ್ತವಾಗಿ ಚರ್ಚಿಸುವುದೊಂದೇ ದಾರಿ.  ಭಾರತದಲ್ಲಿ ಜನ ಸಂಖ್ಯೆ ಹೆಚ್ಚು.  ಹಾಗಾಗಿ ದಿನಾ ಸಾಯುವವರಿಗಾಗಿ ಅಳುವವರು ಯಾರೆಂದು ಯೋಚಿಸುವುದೂ ನಮ್ಮಲ್ಲಿ ರೂಢಿಯಲ್ಲಿದೆ.  ಅದರಲ್ಲೂ ಆತ್ಮಹತ್ಯೆಗೊಳಗಾದವರ ಬಗ್ಗೆ ಅಂತೂ ಮಾತನಾಡುವುದೇ ಕಷ್ಟ.  ನಾವು ದಿನಾ ಸಾಯುವವರಿಗಾಗಿ ಅಳಬಾರದು ಎಂಬುದೇನೋ ಸರಿಯಾದ ಮಾತು.  ಆದರೆ, ಹಾಗೆ ಅಳದೇ ಇರಲು ಕಾರಣಗಳೇನು ಎಂಬುದು ಬಹು ಮುಖ್ಯವಾದ ವಿಚಾರ.  ಸಾಯುತ್ತಿರುವವರು ನಮ್ಮವರಲ್ಲವೇ (ಅನ್ಯ ಭಾಷಿಕರು, ಅನ್ಯ ಜಾತಿ-ಧರ್ಮದವರು ಇತ್ಯಾದಿ)?  ಸಾಯುತ್ತಿರುವವರು ತಮ್ಮ ಬೇಜವಾಬ್ದಾರಿತನದಿಂದ ಸತ್ತರೇ (ಕುಡಿತ, ಸಿಗರೇಟು ಇತ್ಯಾದಿ)? ಇಂಥ ಪ್ರಶ್ನೆಗಳು ನಾವು ದುಃಖಿಸದಂತೆ ಮಾಡುತ್ತವೆ.  ಕೆಲವೊಮ್ಮೆ ಅಂತಹ ಪ್ರಶೆಗಳು ಬೇಡವೆಂದರೂ ಬೇಕಾಗಿ ತಾವಾಗಿ ಏಳುತ್ತವೆ.  ಇಂತಹ ಪ್ರಶ್ನೆಗಳು ತೋರಿಸುವುದು ನಾವು ಭಾರತೀಯರು ಸಾವಿಗೆ ಎಷ್ಟು ಹೆದರುತ್ತೇವೆಯೋ ಅಷ್ಟೇ ಅಸೂಕ್ಷ್ಮರೂ ಆಗಿದ್ದೇವೆ ಎಂಬುದಷ್ಟೇ.  ಯಾವುದೇ ವಿಷಯವು ಸಾರ್ವತ್ರಿಕವಾಗಿ ಗಂಭೀರ ಚರ್ಚೆಗೆ ಆಸ್ಪದ ಕೊಡಬೇಕಾದರೆ ಅದಕ್ಕೆ ಅಸಾಧಾರಣತೆಯ ಪ್ರಮಾಣ ಪತ್ರ ಬೇಕಾಗುತ್ತದೆ.  ಯಾವುದೋ ಒಂದು ರೀತಿಯ ಕೆಲಸ (ಉದಾ:  ಕೃಷಿ) ಮಾಡುವ ಜನರು  ಹಣಕಾಸಿನ ತೊಂದರೆಯಿಂದ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ಬರುವ ಮುಂಚೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ಅಸಾಧಾರಣ ಪರಿಸ್ಥಿತಿ ಖಂಡಿತ ಹೌದು.  ಆದರೆ, ಅದು ಹೀಗೇ ಮುಂದುವರಿಯುತ್ತಾ ಹೋದರೆ ಅದು ಅಸಾಧಾರಣವಾಗಿ ಉಳಿಯದೆ ಹೋಗಬಹುದು.    ನಮ್ಮ ದೇಶ ಕೃಷಿಕರ ದೇಶ.  ನಾವು ಎಷ್ಟು ನಂಬದಿದ್ದರೂ, ನಮ್ಮದೇ ನಗರಗಳಲ್ಲಿ ಕಳೆದುಹೋಗಿದ್ದರೂ ಭಾರತ ಇನ್ನೂ ಕೃಷಿಕರ ದೇಶವೇ ಆಗಿದೆ.  ನಮ್ಮ ದೇಶ ಕೃಶವಾಗದಿರಬೇಕಾದರೆ, ನಾವು ಕೇವಲ ಬಾಹ್ಯ ದೃಷ್ಟಿಯಲ್ಲೇ ಎಲ್ಲವನ್ನೂ ಅಳೆಯುವುದನ್ನು ನಿಲ್ಲಿಸಬೇಕು.  ಹೊರನೋಟಕ್ಕೆ ಕೊಟ್ಟಿರುವ ಅತಿಯಾದ ಪ್ರಾಮುಖ್ಯತೆಯಿಂದ ನೋಟವು ಸಹಜವಾಗಿ ಮೂಡಿಸಬೇಕಾದ ಅನೇಕ ಪ್ರತಿಕ್ರಿಯೆಗಳನ್ನು ಮೂಡಿಸಲು ಸಾಧ್ಯವಾಗುತ್ತಿಲ್ಲ.  ಸಾಯುತ್ತಿರುವವರು ರೈತರೇ ಹೌದು.  ಅದನ್ನು ತಡೆಯಲು ಏನೂ ಮಾಡಲಾಗದೇ ಕೈ ಚೆಲ್ಲಿ ಕುಳಿತ ಸರ್ಕಾರ, ನಾವುಗಳೇ ಹೌದು.  ಸದ್ಯದಲ್ಲೇ ಬಾಹ್ಯನೋಟಗಳು ಯಾವ ಸುಪರಿಣಾಮವನ್ನೂ, ಯಾವ ಪುರುಷಾರ್ಥಗಳನ್ನೂ ಸಾಧಿಸುವುದಿಲ್ಲ ಎಂಬುದೂ ನಮಗೆ ಗೊತ್ತಾಗಬಹುದು.

Advertisements

Please have your say

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s