ಭಾರತೀಯ ದೃಷ್ಟಿ ಮತ್ತು ಸಾವು: ಪ್ರತಿಕ್ರಿಯೆಯ ರೂಪದಲ್ಲಿ ಅತಿಥಿ ಅಂಕಣ ಬರೆದವರು: ಅಖಿಲಾ

ಭಾರತೀಯರಲ್ಲಿ ಹುಟ್ಟು- ಸಾವುಗಳ ಬಗೆಗಿನ ನಂಬಿಕೆಗಳು, ಕಲ್ಪನೆಗಳು ಧರ್ಮಕ್ಕನುಸಾರವಾಗಿ ಭಿನ್ನವಾಗಿದ್ದರೂ ಸಹ  ಪ್ರಕೃತಿ ಸಹಜ ಕ್ರಿಯೆಯಾದ ಆಗಮನ – ನಿರ್ಗಮನಗಳು ಎಲ್ಲರಲ್ಲೂ ಏಕರೂಪವಾದುದು. ಪ್ರತಿಯೊಬ್ಬ ಮನುಷ್ಯನೂ ಸ್ವತಂತ್ರವಾಗಿ ಆಲೋಚಿಸುವ ಶಕ್ತಿಯನ್ನು ಹೊಂದಿದಲ್ಲಿಂದ ಸಾಯುವವರೆಗೂ ಒಂದಿಲ್ಲೊಂದು ಮಾನಸಿಕ ಕ್ಲೇಶಗಳಿಗೊಳಗಾದರೂ ಕೂಡ ಬದುಕಬೇಕೆಂಬ ಛಲದಿಂದ ಜೀವನ  ಸಾಗುತ್ತಿರುತ್ತದೆ. ಆ ಛಲದ ಮೂಲ ಯಾವುದು ಎಂದು ಹುಡುಕುವುದು ಕಷ್ಟವಾದರೂ ಒಬ್ಬೊಬ್ಬರಲ್ಲಿ ಒಂದೊಂದು ಬಗೆಯಾಗಿರುವುದಂತೂ ಸತ್ಯ.

ಭೂಮಿಯಲ್ಲಿ ಜೀವಿಗಳ ಸಮತೋಲನ ಕಾಯ್ದುಕೊಳ್ಳಲು ಹುಟ್ಟು-ಸಾವುಗಳು ಅನಿವಾರ್ಯವಾದುದು.  ಪ್ರಕೃತಿಯೊಂದಿಗೆ ಬದುಕುತ್ತಿರುವ ನಾವು, ಹುಟ್ಟನ್ನು ಸ್ವೀಕರಿಸುವಂತೆ ಸಾವನ್ನು ಸ್ವೀಕರಿಸದೆ ಇರುವುದು ಸೋಜಿಗ. ಒಂದು ಜೀವಿಯು ಭೌತಿಕವಾಗಿ ಅಳಿದರೂ ಕೂಡ ತನ್ನ ಸಂತಾನದ ಮೂಲಕ  ಅನೇಕ ಪೀಳಿಗೆಯವರೆಗೂ ಜೀವಂತವಾಗಿರುತ್ತದೆ. ಇದಕ್ಕೆ ಮನುಷ್ಯನೂ ಹೊರತಲ್ಲ. ಇದೊಂದು ಸರಪಳಿಯಂತೆ. ಮುಂದಿನ ಕೊಂಡಿ ಸೇರಿಕೊಂಡಷ್ಟೇ ಸಹಜವಾದುದು ಹಿಂದಿನ ಕೊಂಡಿ ಕಳಚಿಕೊಳ್ಳುವುದು. ಆದರೆ ಅದೇಕೋ ನಮ್ಮ ಭಾರತೀಯರಲ್ಲಿ ಒಂದು ಶುಭ ಮತ್ತೊಂದು ಅಶುಭ ಎಂಬಂತೆ ಬಿಂಬಿತವಾಗಿದೆ. ಬಹುಶಃ ಒಂದು ಮಗು ಹುಟ್ಟಿದಾಗ, ನಮ್ಮ ಇರುವಿಕೆಯು ಮುಂದಿನ ಪೀಳಿಗೆಗೆ ತಲುಪುತ್ತದೆ ಎಂಬ ಸಂತಸ ಒಬ್ಬರನ್ನು ಕಳೆದುಕೊಂಡಾಗ ನಾವು ಯಾರ ಇರುವಿಕೆಯನ್ನು ಬಿಂಬಿಸಿದ್ದೆವೋ ಅವರೇ ಇಲ್ಲವಾದರಲ್ಲ ಎಂಬ ತಳಮಳವನ್ನು (ಇರುವಿಕೆಯನ್ನು ಬಿಂಬಿಸುವುದು ಎಂದು ನಾನು ಹೇಳುತ್ತಿರುವುದು ವಂಶವಾಹಿಯ (genetics) ದೃಷ್ಟಿಯಿಂದ) ಶುಭ-ಅಶುಭ ಎಂದು ಹೆಸರಿಸಿರಬಹುದು. ಆದರೆ ಪ್ರಕೃತಿಗೆ ಯಾವುದೂ ಶುಭವೂ ಅಲ್ಲ ಅಶುಭವೂ ಅಲ್ಲ. ಒಂದು ಜೀವಿಯ ಹುಟ್ಟು ಎಷ್ಟು ಮುಖ್ಯವೊಸಾವೂ ಕೂಡ ಅಷ್ಟೆ ಮುಖ್ಯ.  (ಕಂಠೀರವ ಬರೆದ ಮೂಲ ಬರಹಕ್ಕಾಗಿ ಇಲ್ಲಿ ಕ್ಲಿಕ್ಕಿಸಿ)

ಫಲಿತಗೊಂಡ ಅಂಡಾಣು ನಿಶ್ಚಿತ ಅವಧಿಯಲ್ಲಿ ಒಂದು ರೂಪವನ್ನು ಹೊಂದಿ ಗರ್ಭಾವಸ್ಥೆಯಿಂದ ಹೊರ ಬಂದ ಕ್ಷಣದಿಂದ ಕೊನೆಯ ಉಸಿರಿನವರೆಗೂ ಪ್ರಕೃತಿಯೊಂದಿಗೆ ಬೆರೆತಿರುತ್ತದೆ. ಪ್ರಕೃತಿಯ ಒಡನಾಟದ ಅವಶ್ಯಕತೆಯನ್ನೇ, ಧಾರ್ಮಿಕವಾಗಿ ಪಂಚಭೂತಗಳು(ಗಾಳಿ, ನೀರು, ಬೆಂಕಿ, ಭೂಮಿ, ಆಕಾಶ) ಎಂದು ಕರೆದಿರಬಹುದು.ಆದ್ದರಿಂದಲೇ ಹಿಂದೂ ಧರ್ಮದಲ್ಲಿ ಶವ ಸಂಸ್ಕಾರವಾದ ನಂತರ ಪಂಚ ಭೂತಗಳಲ್ಲಿ ಲೀನವಾದರು ಎಂದು ಹೇಳುತ್ತಾರೆ. ಇಷ್ಟೆಲ್ಲಾ ಧಾರ್ಮಿಕ ತಳಹದಿಯೊಂದಿಗೆ ತಾತ್ವಿಕ ಚಿಂತನೆ ಇದ್ದರೂ ಸಹ ಸಾವನ್ನು ಸಹಜವಾಗಿ ತೆಗೆದುಕೊಳ್ಳುವ ಮನಸ್ಥಿತಿ ಎಲ್ಲರಲ್ಲೂ ಇಲ್ಲ. ಆದರೆ ಇದು ಎಲ್ಲಾ ಸಂಧರ್ಭಗಳಿಗೂ ಅನ್ವಯಿಸುವುದಿಲ್ಲ. ಒಮ್ಮೊಮ್ಮೆ ಕೆಲವು ರೋಗಗಳಿಂದ ನರಳುತ್ತಿರುವವರ ಪ್ರಾಣ ಹೋಗುವವರೆಗೂ ಅವರಿಗೆ ಬೇಡವೇನಿಸಿದರೂ ಔಷಧೋಪಚಾರ ಮಾಡಿ ಅವರನ್ನುಳಿಸುವ ಪ್ರಯತ್ನ ಬೇಕೇ ಬೇಡವೇ ಎಂಬ ಜಿಜ್ಞಾಸೆ ಹುಟ್ಟುತ್ತದೆ. ಅದೇ ಯಾರೂ ನಿರೀಕ್ಷಿಸಿರದಂತೆ ಜೀವನ ಯಾತ್ರೆಯು  ಅರ್ಧದಲ್ಲೇ ಮೊಟಕುಗೊಳ್ಳುವಂತೆ ಆಗುವ  ಅಪಘಾತಗಳಿಗೂ ಮನಸ್ಸನ್ನು ಸಿದ್ಧವಾಗಿರಿಸಿಕೊಳ್ಳಬೇಕೆಂಬುದು ಭಾವನಾತ್ಮಕವಾಗಿ ಸ್ವಲ್ಪ ಕಷ್ಟಕರವಾದ ವಿಷಯ. ಅಪಘಾತಕ್ಕೊಳಗಾದವರನ್ನು ಉಳಿಸಿಕೊಳ್ಳಲು ಸಂಬಂಧಿಕರು ನಡೆಸುವ ಪ್ರಯತ್ನ ಸಮ್ಮತವಾದುದು, ಆದರೆ ಸ್ವಪ್ರಯತ್ನದಿಂದ ಪ್ರಾಣ ಕಳೆದುಕೊಳ್ಳಲು (ಆತ್ಮಹತ್ಯೆ) ಹೋಗಿ, ಕೆಲವೊಮ್ಮೆ ಪೂರ್ಣವಾಗಿ ಸಾಯದೆ ಇರುವವರನ್ನು ಉಳಿಸಿಕೊಳ್ಳಲು ಅವರ ಸಂಬಂಧಿಕರು ಹೆಣಗುವುದನ್ನು ಕಂಡಾಗ, ಬದುಕಬೇಕಾದವರಿಗೇ ಜೀವನ ಸಾಕೆನಿಸಿದಾಗ ಸುತ್ತಲಿರುವವರು ಯಾಕೆ ಅವರನ್ನು ಉಳಿಸಲು ಹೋರಾಡಬೇಕು ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ.(ಅಥವಾ ಸಾವಿನ ಕದ ತಟ್ಟಿದ ಮೇಲೆ ಬದುಕಬೇಕೆಂಬ ಛಲ ಜಾಗೃತವಾಗುತ್ತದೋ ?) ಸಾಮಾನ್ಯವಾಗಿ ಇಂಥ ಪರಿಸ್ಥಿತಿಯಲ್ಲೇ ವೈದ್ಯರ ಮೇಲೆ ಒತ್ತಡ ಹೇರುವುದೂ ಹೆಚ್ಚಾಗಿರುತ್ತದೆ. ಆದರೆ ಎಷ್ಟೋ ಸಂದರ್ಭಗಳಲ್ಲಿ ಪರಿಸ್ಥಿತಿ ಅವರ ಕೈ ಮೀರಿ ಹೋಗಿರುವುದನ್ನು ಮನದಟ್ಟು ಮಾಡಿಕೊಳ್ಳುವ ಗೋಜಿಗೇ ಹೋಗದಿರುವುದು ಭಾರತೀಯ ವೈದ್ಯರ ದೌರ್ಭಾಗ್ಯ.  ರೋಗಗಳಿಂದ ನರಳುತ್ತಿರುವವರ ಪ್ರಾಣ ಹೋಗುವವರೆಗೂ ಅವರಿಗೆ ಬೇಡವೆನಿಸಿದರೂ ಔಷಧೋಪಚಾರ ಮಾಡಿ ಅವರನ್ನುಳಿಸುವ ಪ್ರಯತ್ನ ಮಾಡುವ ಭಾರತೀಯರ ನಿಲುವು ಬದಲಾಗಬೇಕು ಎಂದೆನಿಸುತ್ತದೆ. ಅಂದರೆ ವೈದ್ಯಕೀಯವಾಗಿ ರೋಗಿಯು ಮೊದಲಿನ ಸ್ಥಿತಿಗೆ ಬರದೆ ಇದ್ದ ಪಕ್ಷದಲ್ಲಿ, ರೋಗಿ ಬಯಸಿದಲ್ಲಿ ಅವನಿಗೆ ದಯಾ ಮರಣವನ್ನು ನೀಡಬಹುದು ಎಂಬ ಕ್ರಮ ಒಪ್ಪುವಂತದ್ದಾಗಿದ್ದರೂ ಅದನ್ನು ಕಾನೂನಿನ ಚೌಕಟ್ಟಿನೊಳಗೆ ಮಾಡಬೇಕಾದ್ದು  ಆವಶ್ಯಕ.

ಇವೆಲ್ಲವನ್ನೂ ಮೀರಿ ಪೂರ್ಣ ಧಾರ್ಮಿಕ ನಂಬಿಕೆ ಎನಿಸಿದರೂ ಕೂಡ ನನಗೆ ಸೋಜಿಗವೆನಿಸುವ ಇನ್ನೊಂದು ಸಂಗತಿಯೆಂದರೆ ಭಾರತೀಯರೇ ಆಗಿರುವ  ಜೈನ ಧರ್ಮದವರ ಸಲ್ಲೇಖನ ವ್ರತ. ಪೂರ್ಣವಾಗಿ ಇದರ ವಿಧಿ-ವಿಧಾನಗಳ ಬಗ್ಗೆ ನನಗೆ ಮಾಹಿತಿ ಇಲ್ಲದಿದ್ದರೂ ಕೂಡ  ಸ್ಥೂಲವಾಗಿ ಹೇಳಬಹುದಾದರೆ ಇದು ಒಂದು ಬಗೆಯಲ್ಲಿ ಸಾವನ್ನು ಬರಮಾಡಿಕೊಳ್ಳುವ ಪ್ರಕ್ರಿಯೆ. ಒಬ್ಬ ಜೈನ ಧರ್ಮಾನುಯಾಯಿಗೆ ಮುಪ್ಪು ಆವರಿಸಿದ್ದು  ತನ್ನ ಸಾಮಾಜಿಕ ಕರ್ತವ್ಯಗಳು ಮುಗಿದಿದ್ದು  ಜೀವನ ಸಾಕೆನಿಸಿದಾಗ  ಸಂಬಂಧಿಕರ ಒಪ್ಪಿಗೆಯೊಂದಿಗೆ, ಧಾರ್ಮಿಕ ಗುರುಗಳ ದೀಕ್ಷೆಯೊಂದಿಗೆ ಈ ವ್ರತವನ್ನು ಹಿಡಿಯಬಹುದು. ಆದರೆ ಇದು ಆತ್ಮಹತ್ಯೆಗಿನ್ನ ಭಿನ್ನವಾದುದು, ಇದರಲ್ಲಿ ಯಾವುದೇ ತರಹದ ವಿಷ ಪ್ರಾಶನವಾಗಲೀ, ಒಮ್ಮೆಗೆ ಪ್ರಾಣ ತೆಗೆದುಕೊಳ್ಳುವಂತಹ ಸಾಧನಗಳನ್ನಾಗಲೀ ಉಪಯೋಗಿಸುವಂತಿಲ್ಲ. ಹಂತ ಹಂತವಾಗಿ ದೇಹವನ್ನು ದಂಡಿಸುತ್ತಾ ಪ್ರಾಣ ತ್ಯಾಗ ಮಾಡುವ ಧಾರ್ಮಿಕ ಪ್ರಕ್ರಿಯೆ. ಧಾರ್ಮಿಕ ತಳಹದಿಯ ಮೇಲಿದ್ದರೂ ಸಾವನ್ನು ನಾವಾಗಿಯೇ ಕರೆಯುವ  ಯೋಚನೆ ಮಾಡುವುದೂ ಕೂಡ ಒಂದು ವಿಶೇಷ ದೃಷ್ಟಿಕೋನ. ಹೀಗೆ ಅನೇಕ ಭಾರತೀಯ ಧರ್ಮಗಳ ಪುರಾಣಗಳಲ್ಲಿ  ಸಾವಿನ ಬಗ್ಗೆ ಅನೇಕ ಪರಿಕಲ್ಪನೆಗಳಿದ್ದರೂ ಕೂಡ ಧಾರ್ಮಿಕವಾಗಿ ಅಲ್ಲದೆ ಸಾಮಾಜಿಕವಾಗಿ ಸಾವಿನ ಬಗ್ಗೆ ಭಾರತೀಯರ ದೃಷ್ಟಿಕೋನ  ಬದಲಾವಣೆಗೆ ಇನ್ನೂ ಕೆಲವು ಕಾಲ ಬೇಕಾಗಬಹುದು, ಆದರೆ ಅಸಾಧ್ಯವೇನಲ್ಲ.

Advertisements

One thought on “ಭಾರತೀಯ ದೃಷ್ಟಿ ಮತ್ತು ಸಾವು: ಪ್ರತಿಕ್ರಿಯೆಯ ರೂಪದಲ್ಲಿ ಅತಿಥಿ ಅಂಕಣ ಬರೆದವರು: ಅಖಿಲಾ”

  1. ಇಡೀ ಪ್ರಪಂಚ ಒಂದು ಬುಟ್ಟಿ ಇದ್ದಂತೆ. ಸಕಲ ನೆಲ, ಜಲ, ಅನಿಲಗಳಲ್ಲಿ ತುಂಬಿರುವ ಜೀವರಾಶಿಗಳೆಲ್ಲ ಈ ಬುಟ್ಟಿಯೊಳಗೇ ತುಂಬಿರಬೇಕು, ತುಳುಕಬಾರದು. ಇಂತಿಪ್ಪ ಪರಿಸ್ಥಿತಿಯಲ್ಲಿ, ಸಾವು ಅನಿವಾರ್ಯವಷ್ಟೆ ಅಲ್ಲ, ಅಗತ್ಯ ಕೂಡ. ಈ ಹೊಂದಾಣಿಕೆ ಪ್ರಕೃತಿ ತನ್ನಿಂದ ತಾನೇ, ಯಾವುದೇ ರಾಗದ್ವೇಷಗಳಿಲ್ಲದೇ ಮಾಡುತ್ತೆ.

Please have your say

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s