ಕೆಂಡ-ಮಂಡಲ-ಕಮಂಡಲಗಳ ಸುತ್ತ ಸುಬ್ಬು ಅವರ ಕವನದ ವಿಶ್ಲೇಷಣೆ

ದಲಿತ ಸಾಹಿತ್ಯದಲ್ಲಿ ಎರಡು ಬಗೆ ಇರುತ್ತದೆಂದು ಕಳೆದ ತಿಂಗಳು ಪ್ರಜಾವಾಣಿಗೆ ನೀಡಿದ್ದ ಸಂದರ್ಶನವೊಂದರಲ್ಲಿ ಕವಿ ಸತ್ಯಾನಂದ ಪಾತ್ರೋಟ ಹೇಳಿದ್ದರು.  ಸರಳವಾಗಿ ಹೇಳುವುದಾದರೆ ಒಂದು ದಲಿತರೇ ದಲಿತರ ಬಗ್ಗೆ ಬರೆದದ್ದು (ನಿಜವಾದ ದಲಿತ ಸಾಹಿತ್ಯ).  ಎರಡನೇದು ದಲಿತೇತರರು ದಲಿತ-ಪರವಾಗಿ ಬರೆದದ್ದು (ದಲಿತರ ಕುರಿತು ಸಹಾನುಭೂತಿಯುಳ್ಳ ಸಾಹಿತ್ಯ).  ನಾನೂ ಕವಿ.  ದಲಿತ ಕವಿ ಅಲ್ಲ.  ನಾನು ಎಂದೂ ನನ್ನ ಅನುಭವಕ್ಕೆ ಬಾರದ್ದನ್ನು ಬರೆಯಲು ಸಾಧ್ಯವಾಗಿಲ್ಲ.  ಭೌತಿಕ ಅಥವಾ ಮಾನಸಿಕ ಅನುಭವಗಳ ಆಸರೆ ಇಲ್ಲದ ಕಲ್ಪನೆಗಳಿಗೆ, ಬರವಣಿಗೆಗಳಿಗೆ ಬೆಲೆಯಿಲ್ಲ ಎಂದು ನಂಬಿರುವವನು ನಾನು.  ಬೇರೆಯವರ ಅನುಭವಗಳನ್ನು, ಕಲ್ಪನೆಗಳನ್ನು ಊಹಿಸಿಕೊಳ್ಳುವುದು ಕಷ್ಟ, ಬಹುಶಃ ಅಸಾಧ್ಯ.  ಆದರೂ ನನಗೆ ಅವಕಾಶ ಸಿಕ್ಕಾಗಲೆಲ್ಲಾ ನಿಜವಾದ ದಲಿತ ಸಾಹಿತ್ಯವನ್ನೂ, ದಲಿತ ಪರ ಸಹಾನುಭೂತಿಯುಳ್ಳ ಸಾಹಿತ್ಯವನ್ನೂ ಓದಿದ್ದೇನೆ.  ಅಂತಹ ಸಾಹಿತ್ಯವನ್ನು ಓದಿದಾಗ ನನಗಾದ ಅನುಭವವನ್ನು ಶಕ್ತವಾಗಿ, ದೃಢವಾಗಿ ದಾಖಲಿಸಬಲ್ಲೆ ಎಂಬ ನಂಬಿಕೆಯಿದೆ.

“In this article (in Kannada), I have tried to critically read a poem by Subbu Holeyar, a dalit poet from Karnataka, India.  I see the poem as a metaphor for the current political discourse in India, dominated by Mandal vs. Kamandal arguments”.  

ದೀಪಾವಳಿ ಮೊನ್ನೆ ತಾನೇ ಆಚರಿಸಿದ್ದಾಗಿದೆ.  ಮೂರು ವರ್ಷಗಳ ಹಿಂದೆ ದೀಪಾವಳಿಯ ಆಸುಪಾಸಿನಲ್ಲಿ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿದ್ದ ಪದ್ಯವೊಂದು ನನ್ನನ್ನು ಬಹಳವಾಗಿ ಕಾಡಿತ್ತು.  ಅದನ್ನು ಪ್ರಜಾವಾಣಿಯ ಇ-ಪೇಪರ್ನಲ್ಲಿ  ಹುಡುಕಿ ಡೌನ್ಲೋಡ್ ಮಾಡಿಕೊಂಡು ಇಟ್ಟುಕೊಂಡಿದ್ದೆ.  ಅದರ ಬಗ್ಗೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಲು ಈಗ ಮನಸ್ಸಾಗಿದೆ.  ದೀಪಾವಳಿಯ ಬೆಳಕಿಗಿಂತ, ಆ ಬೆಳಕು ಆರಿದ ಮೇಲೆ ಉಳಿಯುವ ಪಟಾಕಿ ಮದ್ದಿನ ವಾಸನೆಯುಳ್ಳ “ಹವಿಸ್ಸೇ ಇಲ್ಲದೆ ಉರಿಯುತ್ತಿದ್ದೇನೆ” ಎಂಬ ಶೀರ್ಷಿಕೆಯುಳ್ಳ ಆ ಕವನವನ್ನು ಬರೆದ ಕವಿ ಸುಬ್ಬು ಹೊಲೆಯಾರ್. ಸುಬ್ಬು ಅವರ ಇತರ ಕವನಗಳನ್ನು ನಾನು ಓದಿಲ್ಲ.  ಹಾಗಾಗಿ ಅವರ ಕುರಿತಾಗಿ ನಾನು ಏನೂ ಹೇಳಲಾರೆ.  ಅವರ ಮತ್ತಷ್ಟು ಕವನಗಳನ್ನು ಓದುವ ಹಂಬಲವಿದೆ.  ಇನ್ನೂ ಸಾಧ್ಯವಾಗಿಲ್ಲ.  ಪ್ರಜಾವಾಣಿಯಲ್ಲೇ ಮತ್ತೊಮ್ಮೆ ಅವರ ಕವನ ಸಂಕಲನದ ಕುರಿತಾದ ವಿಮರ್ಶೆ ಬಂದಿತ್ತು.   ಆ ಲೇಖನದಲ್ಲಿ ವಿಮರ್ಶಕರು ಸುಬ್ಬು ಅವರನ್ನು ಸೂಕ್ಷ್ಮ ಸಂವೇದನೆಯುಳ್ಳ ದಲಿತ ಕವಿ ಎಂದು ಗುರ್ತಿಸಿದ್ದರು.  ಸದ್ಯಕ್ಕೆ ಅಷ್ಟು ಸಾಕು.  “ಹವಿಸ್ಸೇ ಇಲ್ಲದೆ ಉರಿಯುತ್ತಿದ್ದೇನೆ” ಕವಿತೆಯ ೨೩ ಸಾಲುಗಳ ವಿಂಗಡಣೆಯಲ್ಲಿ ಮೇಲ್ನೋಟಕ್ಕೆ ಯಾವ ಕ್ರಮವೂ ಕಾಣುವುದಿಲ್ಲ.  ಬಹುಶಃ ಅದು ಬೇಕಾಗೂ ಇಲ್ಲ.  ಕವನದ ಕುರಿತಾಗಿ ಬರೆಯುವಾಗ, ಕವನದಲ್ಲಿ ಮಾತನಾಡುವ ಕವಿಯನ್ನು ಏಕವಚನದಲ್ಲೇ ಸಂಭೋದಿಸುವುದು ಸೂಕ್ತವೆಂದು ಭಾವಿಸಿದ್ದೇನೆ.

ಕವನದ ಪಠ್ಯಕ್ಕಾಗಿ ಇಲ್ಲಿ ನೋಡಿ.

havissE illade uriyuttiddEne_prajavani
ಹವಿಸ್ಸೇ ಇಲ್ಲದೆ ಉರಿಯುತ್ತಿದ್ದೇನೆ (Poem and image courtesy: http://www.prajavani.net

ಕವಿಯೇ ಹೇಳಿಕೊಳ್ಳುವಂತೆ ಅವನು ಕುಲವಿಲ್ಲದ ಕವಿ.  ಅವನಿಗೆ ತನ್ನ ಎಳೆಯ ವಯಸ್ಸಿನಿಂದಲೂ ಬೆಂಕಿಯೊಂದಿಗೆ ಒಡನಾಡಿ ಅಭ್ಯಾಸವಿರುತ್ತದೆ.  ಕೆಂಡ ತರುವುದು, ಕೆಂಡದೊಲೆ ಉರಿಸುವುದು, ಕೆಂಡ ಹಾಯುವುದು ಇತ್ಯಾದಿ ಎಲ್ಲಾ ಚಟುವಟಿಕೆಗಳೂ ಬಾಲ್ಯದ ಸಹಜವಾದ ಭಾಗವಾಗಿರುತ್ತದೆ.  ಆದರೆ ಕೆಂಡದ ಸಂಗ ಆಡುವ ಯುವಕನಾಗುವ ಹೊತ್ತಿಗೆ ಕೆಂಡದ ಅವ್ಯಕ್ತ ರೂಪಗಳಿಂದ ಪೀಡಿತಗೊಳ್ಳುತ್ತಾನೆ.  ಅವನ ಕುಲವಿಲ್ಲದ ಇರವನ್ನು ಆಡಿಕೊಳ್ಳುವವರ ಕೆಂಡದಂಥ ಮಾತುಗಳಿಂದ ಮನಸ್ಸು ಸುಟ್ಟು ಹೋಗುತ್ತದೆ.   ಆ ಒಳಬೆಂಕಿಯಲ್ಲಿ ಬೆಂದ ಕವಿಗೆ ಮತ್ತೆ ಮತ್ತೆ ಬೇರೆಯವರಿಂದ ಕೆಂಡ ಕೇಳಿ ಪಡೆಯುವ ಪ್ರಮೇಯ ಬರುವುದಿಲ್ಲ.  ಆ ಒಳಬೆಂಕಿಯು ಎಲ್ಲವನ್ನೂ ನುಂಗಿ ಎಂದೂ ಆರದ ಕಾಳ್ಗಿಚ್ಚಿನಂತೆ, ತನ್ನ ಕೆಂಡ ತಾನೇ ಮಾಡಿಕೊಂಡು ತಾನಾಗೇ ಮತ್ತೆ ಮತ್ತೆ ಉರಿಯುತ್ತಿರುವಾಗ ಕವಿ ಈ ಪದ್ಯವನ್ನು ಬರೆದಿದ್ದಾನೆ.  ಈ ಪದ್ಯ ಬರೆಯುವಾಗ ಅವನಲ್ಲಿ  ಇನ್ನೂ ಹೆಚ್ಚಿನ ಶಾಖವನ್ನು ತಾನು ತಾಳಿಕೊಳ್ಳಬಲ್ಲೆನೇ ಎಂಬ ಪ್ರಶ್ನೆ ಏಳುತ್ತದೆ. ಕೆಂಡದ ಮಳೆಯೇ ಸುರಿದು ಅದರಲ್ಲಿ ಅವನು ನೆಂದರೆ ಏನಾಗಬಹುದು ಎಂಬ ಆಲೋಚನೆಯೊಂದಿಗೆ ಕವಿಯ ಬರವಣಿಗೆ ನಿಲ್ಲುತ್ತದೆ.

ಇವಿಷ್ಟು ಕವನದ ಗದ್ಯ ರೂಪದ ಸಾರಾಂಶ.   ಇನ್ನು ಈ ಕವನ ನನ್ನನ್ನು ಏಕೆ ಪ್ರಭಾವಿಸಿದೆ ಎಂದು ಹೇಳುತ್ತೇನೆ.  ಸಾವಿರಾರು ವರ್ಷಗಳ ಕಾಲ ದಲಿತರ ವಿರುದ್ಧ ನಡೆದ (ಇನ್ನೂ ಕೆಲವು ಕಡೆ ನಡೆಯುತ್ತಿರುವ)  ಅನ್ಯಾಯಗಳ ಫಲವಾಗಿ ಈಗಿನ ಭಾರತದಲ್ಲಿ “ಮಂಡಲ-ಕಮಂಡಲ” ರಾಜಕಾರಣ  ಬಲವಾಗಿ ಬೇರೂರಿದೆ.  ದಲಿತರಲ್ಲದ ನಮ್ಮಂಥವರು ಈಗ ಯಾವುದೇ ರೀತಿಯಲ್ಲೂ ಯಾರನ್ನೂ ಅಮಾನುಷವಾಗಿ ನೋಡಿಲ್ಲ.  ಯಾರೋ ಯಾವಾಗಲೋ ಮಾಡಿದ ತಪ್ಪಿಗೆ ಇಂದಿನ ಜನರನ್ನು ದೂಷಿಸುವುದು ತರವಲ್ಲ ಎಂದು ಅನೇಕರು ವಾದಿಸಿದ್ದೂ ಇದೆ.  ಆ ವಾದದಲ್ಲಿ ಸತ್ವವೂ ಇದೆ.  ಆದರೆ, ಸುಬ್ಬು ಅವರ ಕವನ ಹೇಳುವಂತೆ ಕೆಟ್ಟ ಅನುಭವಗಳು ಇಂದೇ, ನಮ್ಮ ಕಾಲದಲ್ಲೇ ಆಗಬೇಕಾಗಿಲ್ಲ.  ಸಾರ್ವಜನಿಕವಾಗಿ, ದೇಶವ್ಯಾಪಿಯಾಗಿ ನಡೆದ ಕೆಟ್ಟ ಘಳಿಗೆಗಳನ್ನು ಮರೆಯಬೇಕಾದರೆ,  ಆ ಕೆಟ್ಟ ಘಳಿಗೆಗಳಿಗೆ ಸಾಕ್ಷಿಯಾದ ತಲೆಮಾರುಗಳೆಲ್ಲ ಕಳೆಯಬೇಕು.  ನಾವು ಅದರಲ್ಲಿ ಭಾಗಿಯಲ್ಲದಿದ್ದರೂ, ಅನುಭವಗಳು ನಮ್ಮದಲ್ಲದಿದ್ದರೂ ತಾಳ್ಮೆಯಿಂದ ಕಾಯಬೇಕಾಗಬಹುದು.  ಹಳೆಯ ಕೆಟ್ಟ ಅನುಭವಗಳು ಮರೆಯಾಗುವ ಮುಂಚೆ ಹೊಸ ಕೆಟ್ಟ ಅನುಭವಗಳು ಆಗದಂತೆ ಎಚ್ಚರ ವಹಿಸುವುದು ಕಷ್ಟವೇ ಆದರೂ ಸುಬ್ಬು ಅಂಥವರ ಹಳೆಯ ನೆನಪುಗಳು ಕೆಂಡವಾಗಿ ಸುಡುವುದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ.  ಮತ್ತೆ ಹೊಸ ಸುಬ್ಬುಗಳು ಇಂತಹ ಕವನಗಳನ್ನು ಬರೆಯುವ ಪ್ರಮೇಯ ಬರಲೂಬಹುದು.  ಇನ್ನೂ ಹಲವಾರು ತಲೆಮಾರುಗಳವರೆಗೆ ಮಂಡಲ-ಕಮಂಡಲದ ವಿಪರೀತಗಳು ಮುಗಿಯುವಂತೆ ಕಾಣುವುದಿಲ್ಲ.

Advertisements

Please have your say

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s