ಕಾವೇರಿ ವಿವಾದ: ಕರ್ನಾಟಕವನ್ನು ಜಯಲಲಿತಾ ದ್ವೇಷಿಸಲು ಕಾರಣವೇನು?

parallelsಮದ್ರಾಸಿನಿಂದ ಬೆಂಗಳೂರಿಗೆ ಇರುವಷ್ಟು ಬಸ್ಸು ರೈಲುಗಳ ಸಂಚಾರ ದುರದೃಷ್ಟವಶಾತ್ ಬೆಂಗಳೂರು ಹುಬ್ಬಳ್ಳಿ, ಅಥವಾ ಬೆಂಗಳೂರು ಬೀದರ್, ಅಥವಾ ಬೆಂಗಳೂರು ಮಂಗಳೂರಿನ ನಡುವೆ ಇಲ್ಲ.  ಈಗಿನ ಟೆಲಿಫೋನ್, ಇಂಟರ್ನೆಟ್ ವ್ಯವಸ್ಥೆಯಂತೂ ಹಿಂದೆಂದಿಗಿಂತಲೂ ಚೆನ್ನಾಗಿದೆ. ಬೆಂಗಳೂರು ಐಟಿ ನಗರಿ ಬೇರೇ!  ಹೀಗಿದ್ದಾಗ್ಯೂ ತಮಿಳುನಾಡಿನ ಮುಖ್ಯಮಂತ್ರಿ (೨೦೧೬ ಅಕ್ಟೋಬರ್ನಲ್ಲಿ ಇನ್ನೂ ಅಧಿಕಾರದಲ್ಲಿರುವ) ಜಯಲಲಿತಾ ಅವರು ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ಕರ್ನಾಟಕವನ್ನು ಸುಪ್ರೀಂ ಕೋರ್ಟಿನಲ್ಲೇ ಲಾಯರ್ಗಳ ಮೂಲಕ ಮಾತನಾಡಿಸುವುದು ಆಕೆಯ ಪದ್ಧತಿ. ಅದ್ಯಾವುದೂ ಬೇಡ. ಕೇಂದ್ರ ಸರ್ಕಾರವನ್ನು ಬೇಕಾದಂತೆ ಹೆದರಿಸಿ, ಪುಸಲಾಯಿಸಿ ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿಗಳ ಸಾಂದ್ರತೆಯನ್ನು ಹೆಚ್ಚಾಗಿಸಿಕೊಂಡಿರುವ ಕೀರ್ತಿ ಅವರದ್ದು.  ಮನಸ್ಸು ಮಾಡಿದರೆ ಜಯಲಲಿತಾ ಅವರು ತಮ್ಮ ಐಷಾರಾಮಿ ಯಂತ್ರ ರಥದಲ್ಲಿ ಬೆಂಗಳೂರಿಗೆ ಬರುವುದೂ ಕಷ್ಟವಲ್ಲ.  ಆದರೆ,  ಆಕೆ ಹಾಗೆ ಮಾಡುವುದಿಲ್ಲ.  ಪಾಪ, ಮುದುಕ ಕರುಣಾನಿಧಿಯವರಾದರೂ ಕರ್ನಾಟಕದ ರಾಜಕಾರಣಿಗಳ ಜೊತೆ ಮಾತನಾಡುವ ಕರುಣೆ ಸೌಜನ್ಯ ತೋರುತ್ತಾರೆ.  ಈ ಜಯಲಲಿತಾ ಎಂಬ ಮಾಜಿ ನಟಿ, ನರ್ತಕಿಗೆ ಕರ್ನಾಟಕ ಎಂದರೆ ಕಿಡಿ ಕಾರುವಷ್ಟು ದ್ವೇಷ.  ಯಾಕೆ ಹೀಗೆ?

ಮನುಷ್ಯನಿಗೆ ತನ್ನ ಮೂಲ ಬೇರಿನ ಅರಿವು ಹುಟ್ಟಿನಿಂದ ಸಾವಿನವರೆಗೆ ಅನೇಕ ರೀತಿಗಳಲ್ಲಿ ಕಾಡುವಂಥ ವಿಷಯ.  ಕೆಲವರಿಗೆ ಅನಿವಾರ್ಯವಾಗಿ ತಮ್ಮ ಹುಟ್ಟಿದೂರಿನಿಂದ ದೂರ ಇರಬೇಕಾದ ಪರಿಸ್ಥಿತಿ ಇರುತ್ತದೆ. ಕೆಲಸಕ್ಕಾಗಿಯೋ, ಶುಶ್ರೂಷೆಗಾಗಿಯೋ, ಕೌಟುಂಬಿಕ ದುರಂತಗಳಿಂದಲೋ, ದಂಗೆ, ಭೂಕಂಪ, ನೆಲ ಮುಳುಗಡೆ ಇತ್ಯಾದಿಗಳ ಕಾರಣದಿಂದಲೋ ತಮ್ಮ ಹುಟ್ಟೂರನ್ನು ತೊರೆದು ಬೇರೆಡೆ ನೆಲೆಸಿರುವವರ ಸಾಲಿನಲ್ಲಿ ಜಯಲಲಿತಾ ಕೂಡ ಒಬ್ಬರು.  ಕರ್ನಾಟಕದ ಮೇಲುಕೋಟೆಯಲ್ಲಿ ಜನಿಸಿದ ಜಯಲಲಿತಾರ (ಅಯ್ಯಂಗಾರಿ ಹೆಣ್ಣು) ಅಜ್ಜ ಮೈಸೂರು ಮಹಾರಾಜರ ಆಸ್ಥಾನದಲ್ಲಿ ವೈದ್ಯರಾಗಿದ್ದವರು. ಕನ್ನಡ ಬಲ್ಲ ಅನೇಕ ಅನ್ಯ ಭಾಷಿಕ ಕುಟುಂಬಗಳು ಕರ್ನಾಟಕದಲ್ಲಿ ನೂರಾರು ವರ್ಷಗಳಿಂದ ನೆಲಸಿವೆ. ಮನೆಮಾತು ತೆಲುಗು, ತಮಿಳು ಅಥವಾ ಉರ್ದು ಆಗಿದ್ದರೂ ಕನ್ನಡವನ್ನು ಚೆನ್ನಾಗಿ ಮಾತನಾಡುತ್ತಾರೆ ಆ ಜನ. ಮೇಲುಕೋಟೆಗೂ ಕಾವೇರಿ ನದಿಗೆ ಕಟ್ಟಿರುವ ಕನ್ನಂಬಾಡಿ ಕಟ್ಟೆಗೂ (KRS) ಬರೀ ೨೫ ಮೈಲು ದೂರ ಅಷ್ಟೇ. ಕಾರಣಾಂತರಗಳಿಂದ ಜಯಲಲಿತಾ ತಮಿಳುನಾಡಿನ ಮದ್ರಾಸಿನಲ್ಲಿ ಚಲನ ಚಿತ್ರನಟಿಯಾಗಿ ಬೆಳೆದರು. ರಾಜಕಾರಣಿಯಾದ ಮೇಲಂತೂ ಸಂಪೂರ್ಣವಾಗಿ ತಮಿಳು ಲೋಕದಲ್ಲಿ ತೇಲಾಡುವಂತಾಯ್ತು.  ಇಂತಹ ಹೆಂಗಸಿಗೆ ಕಾವೇರಿ ನದಿ ನೀರಿನ ಹಂಚಿಕೆಯ ವಿಚಾರದಲ್ಲಿ “ತಾನು ಕರ್ನಾಟಕದಲ್ಲಿ ಹುಟ್ಟಿದ್ದರೂ ಸಂಪೂರ್ಣವಾಗಿ ತಮಿಳ್ಕನ್ಯೆಯಾಗಿ ತಮಿಳರ ಸೇವೆ ಮಾಡುತ್ತಿದ್ದೇನೆ” ಎಂದು ತೋರಿಕೊಳ್ಳುವುದು ಮುಖ್ಯ ಆದರೆ ಆಶ್ಚರ್ಯ ಏನಿಲ್ಲ.  ತಮಿಳು ಭಾಷೆ, ತಮಿಳು ಜನ ಎಂದರೆ ಜಗತ್ತಿನಲ್ಲೇ ಶ್ರೇಷ್ಠ ಎಂದು ಕುರುಡು ನಂಬಿಕೆ, ಭ್ರಮೆಯಲ್ಲಿರುವ ಆ ರಾಜ್ಯದ ಜನತೆಯು  ಕನ್ನಡನಾಡಿನಲ್ಲಿ ಹುಟ್ಟಿದ ತಮಿಳ್ಗನ್ನಡತಿ ಒಬ್ಬಳನ್ನು ಮುಖ್ಯಮಂತ್ರಿ ಎಂದು ಒಪ್ಪಿರುವುದೇ ಆಶ್ಚರ್ಯ.  ಆಕೆ ತಮಿಳು  ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರಬಹುದು.  ಆದರೆ ದ್ವಿಭಾಷಾ, ತ್ರಿಭಾಷಾ, ಚತುರ್ಭಾಷಾ ಚಿತ್ರ ನಟರು ಎಷ್ಟು ಜನ ಬಂದು ಹೋಗಿಲ್ಲ?  ಕರ್ನಾಟಕಕ್ಕೆ ಈಕೆ ಒಂದು ಹನಿ ಮೃದುತ್ವ ತೋರಿಸಿದರೂ ತಮಿಳರು ಆಕೆಯನ್ನು ದ್ರೋಹಿ ಎಂದು ಹಣೆಪಟ್ಟಿ ಕಟ್ಟಿ ಅವಹೇಳನ ಮಾಡಿ ಗಡೀಪಾರು ಮಾಡಬಹುದು.  ಶಿಕ್ಷೆಗೆ ಹೆದರಿ ಜಯಲಲಿತಾ ತಮ್ಮ ಹುಟ್ಟಿದ ನಾಡಿಗೆ ವಿರುದ್ಧವಾಗಿ, ಅಗತ್ಯಕ್ಕಿಂತಲೂ ಹೆಚ್ಚಾದ ಕಿಡಿಕಾರುತ್ತಾರೆ ಎಂಬುದು ನನ್ನ ಅಭಿಮತ. 

ಹುಟ್ಟಿದೂರು, ಬೆಳೆದ ಊರು, ಅನ್ನ ಕೊಟ್ಟ ಊರು ಇತ್ಯಾದಿಗಳಲ್ಲಿ ಯಾವುದಕ್ಕೆ ಮನುಷ್ಯನ ನಿಷ್ಠೆ ಮೀಸಲಾಗಿರಬೇಕು ಎಂಬುದು ಜಟಿಲ ಸಮಸ್ಯೆ.  ನನ್ನ ಪ್ರಕಾರ ಮನುಷ್ಯನ ನಿಷ್ಠೆ ಅವನು ಬೆಳೆದ ಊರಿಗೆ ಮೀಸಲಾಗಿರುತ್ತದೆ. ಹುಟ್ಟಿದೂರು, ತಾಯ್ನುಡಿ, ದುಡಿದ ಊರು ಎಲ್ಲವೂ ಪ್ರಾಸಂಗಿಕ.   ಅನ್ನ ಕೊಟ್ಟ ಊರು ಅತಿ ಮುಖ್ಯ ಎಂದು ಜಯಲಲಿತಾರ ನಡವಳಿಕೆ (ಇನ್ನೂ ಅನೇಕರ ನಡವಳಿಕೆ) ತೋರಿಸುತ್ತದೆ.  ಆದರೆ ಜಯಲಲಿತಾರ ಹದಿಹರೆಯದಲ್ಲಿ ಅವರು ಮದ್ರಾಸಿನಲ್ಲೇ ಇದ್ದರು ಎಂಬುದನ್ನು ಮರೆಯಬಾರದು. ಹೊರ ದೇಶದಲ್ಲಿರುವ ಭಾರತೀಯ ಸಂಜಾತರನ್ನೇ ನೋಡಿ.  ಅವರಲ್ಲಿ ಭಾರತದ ಬಗ್ಗೆ ಇರುವ ಕಕ್ಕುಲಾತಿ ಕಡಿಮೆ ಆಗಿರುವುದಿಲ್ಲ.  ಅದಕ್ಕೆ ಕಾರಣ ಅನ್ನದ ಋಣ ಅಲ್ಲ.  ಬದಲಾಗಿ ಅವರ ಬಾಲ್ಯದ ಋಣ ಅಥವಾ ಬಾಲ್ಯದಲ್ಲಿ ಅವರ ಮನಸ್ಸನ್ನು ಕಟೆದ ವಾತಾವರಣಕ್ಕಾಗಿ ಹಾತೊರೆತ. ಹಾಗಿದ್ದಾಗ್ಯೂ ಅನ್ಯ ದೇಶದ ಭಾರತೀಯ ಸಂಜಾತ ನಾಗರಿಕರಿಗೆ ಭಾರತದ  ಆಂತರಿಕ ವ್ಯವಾಹಾರದಲ್ಲಿ ಎಷ್ಟೇ ಆಸಕ್ತಿ ಇದ್ದರೂ, ಅವರ ನಿಷ್ಠೆ ಭಾರತಕ್ಕಾಗಿ ಇರುವುದಿಲ್ಲ, ಇರಬಾರದು, ಇದ್ದರೆ ಅದು ತಪ್ಪು. ಭಾರತವನ್ನು ತೊರೆದು ಅನ್ಯ ದೇಶದ ನಾಗರಿಕತ್ವವನ್ನು ಸ್ವೀಕರಿಸಿದವರಿಗೂ ಅದು ಅನ್ವಯಿಸುತ್ತದೆ.  ಅನ್ಯ ದೇಶದಲ್ಲೇ ಹುಟ್ಟಿ ಬೆಳೆದ ಭಾರತೀಯ ಮೂಲದ ಮಕ್ಕಳನ್ನು ನೋಡಿ ಸಾಕು.  ಅವರು ಯಾವ ರೀತಿಯಿಂದಲೂ ಭಾರತೀಯರಲ್ಲ.  ಮೈ ಬಣ್ಣಕ್ಕೂ, ತಾಯ್ನುಡಿಗೂ, ವಂಶವಾಹಿಗಳಿಗೂ, ಭಾರತೀಯತೆಗೂ ಅರ್ಥಾತ್ ಸಂಬಂಧವಿಲ್ಲ. 

ಇಷ್ಟೆಲ್ಲಾ ಚರ್ಚಿಸಿ, ಜಯಲಲಿತಾರ ನಡವಳಿಕೆಯನ್ನು ಸಹಜದ ಸಾಲಿಗೆ ಸೇರಿಸುವ ಉದ್ದೇಶ ನನಗಿಲ್ಲ.  ಜಯಲಲಿತಾರ ನಿಷ್ಠೆ ಎನ್ನುವುದಕ್ಕಿಂತ ಸ್ವಪ್ರತಿಷ್ಠೆ ಕರ್ನಾಟಕಕ್ಕೆ ತೊಂದರೆ ಕೊಡುತ್ತಿದೆ ಎನ್ನಬಹುದು.  ಕಾರಣ ಏನೇ ಇದ್ದರೂ ಜಯಲಲಿತಾರ ಕರ್ನಾಟಕ ವಿರೋಧಿ ಧೋರಣೆ ತುಂಬಾ ಕೀಳು ಮಟ್ಟದ್ದು ಎಂಬುದರಲ್ಲಿ ಸಂಶಯವಿಲ್ಲ.  ನೀರಿಗಾಗಿ ಕನ್ನಡಿಗರನ್ನು ಕೋರ್ಟಿಗೆಳೆದು, ಅನ್ಯಾಯವಾಗಿ ನ್ಯಾಯಾಧೀಶರುಗಳಿಂದ ಕರ್ನಾಟಕವನ್ನು ನಿಂದನೆಗೆ ಗುರಿಪಡಿಸುವ ಜಯಲಲಿತಾ ಕರ್ನಾಟಕದಲ್ಲಿ ಹುಟ್ಟಿದವರು ಎಂಬುದು ನಾಚಿಕೆಗೇಡಿನ ವಿಷಯ.  ತಾನು ಯಾಕಾದರೂ ಕರ್ನಾಟಕದಲ್ಲಿ ಹುಟ್ಟಿದೆನೋ ಎಂದು ಆಕೆಯೂ ಪರಿತಪಿಸುತ್ತಿರಬಹದು.  ಪರಿತಪಿಸಿ ಪ್ರಯೋಜನವಿಲ್ಲ.  ಕರ್ನಾಟಕದೊಂದಿಗೆ ಅನುಸಂಧಾನ ತಮಿಳರಿಗೆ ಒಳಿತು ಎಂದು ಜಯಲಲಿತಾ ಅರಿತ ದಿನ ಅವರೂ ಉದ್ಧಾರ ಆಗುತ್ತಾರೆ, ಅವರ ಅಜ್ಜನಿಗೆ ಅನ್ನ ಹಾಕಿದ ಕನ್ನಡದ ನೆಲವೂ ನಿಟ್ಟುಸಿರು ಬಿಡುತ್ತದೆ. 

Advertisements

Please have your say

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s