ಬೆಟ್ಟಕ್ಕೆ ಹೊತ್ತ ಹೂವಿನ ಆಯಸ್ಸು ಹೂವಿಗಿರಲಿ, ಹೊತ್ತವರಿಗಿರಲಿ, ಬೆಟ್ಟಕ್ಕೂ ಗೊತ್ತಿರುವುದಿಲ್ಲ

ಕನ್ನಡ ಚಿತ್ರರಂಗ ನಿರ್ಮಾಣ ಮಾಡಿದ ಸಾರ್ವಕಾಲಿಕ ಶ್ರೇಷ್ಠ ಸಿನೆಮಾಗಳಲ್ಲಿ ಒಂದು ಎನ್. ಲಕ್ಷ್ಮೀನಾರಾಯಣ ನಿರ್ದೇಶನದ “ಬೆಟ್ಟದ ಹೂವು” (1985).  ಅದರಲ್ಲಿ ಮುಖ್ಯ ಪಾತ್ರ ವಹಿಸಿದ್ದ ಬಾಲನಟ ಪುನೀತ್ ರಾಜಕುಮಾರ್ ಮೊನ್ನೆ ಹೃದಯಾಘಾತದಿಂದ ತಮ್ಮ 46 ರ ನಡುವಯಸ್ಸಿನಲ್ಲೇ ಕೊನೆಯುಸಿರೆಳೆದ ದುಃಖದ ಸಂಗತಿಯನ್ನು ಎಲ್ಲರೂ ಬಲ್ಲರು (ಜಿಲ್ಲಾ ವಾರ್ತಾ ಪತ್ರಿಕೆಯಿಂದ ಹಿಡಿದು ಬಿಬಿಸಿ ನ್ಯೂಸ್ ವರೆಗೆ ಎಲ್ಲೆಡೆಯೂ ಪ್ರಸಾರವಾದ ಸುದ್ದಿ). ಪುನೀತರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಲು ಕರ್ನಾಟಕದ ಎಲ್ಲೆಡೆಯಿಂದ ಸಾವಿರಗಟ್ಟಲೆಯಲ್ಲಿ ಜನ ಬೆಂಗಳೂರಿಗೆ ಬಂದಿದ್ದಾರೆ. ಅವರಿಗೆಲ್ಲ ಪುನೀತರು ದೊಡ್ಡ ಹೀರೋ. ನಾನು ಪುನೀತರು ಅಭಿನಯಿಸಿದ ಇತ್ತೀಚಿನ ಯಾವ ಸಿನಿಮಾವನ್ನೂ ನೋಡಲೇಬೇಕು ಎಂದು ನೋದಿದ್ದಿಲ್ಲ. ಆಧುನಿಕ “ಫಾರ್ಮುಲಾ” ಆಧಾರಿತ ಸಿನಿಮಾಗಳಲ್ಲೇ ಬಹುತೇಕ ಅವರೂ ನಟಿಸಿದ್ದು ಎಂಬುದು ಕಹಿಸತ್ಯ. ಆದರೂ ಇತ್ತೀಚಿನ ಅವರ “ರಾಜಕುಮಾರ” ಎನ್ನುವ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳಿದ್ದೆ.  ಅದನ್ನು ಈಗಲಾದರೂ ನೋಡಬೇಕು. ಬಹುಶಃ ನೋಡಿದರೆ ನನ್ನ ದುಃಖದ ಕಟ್ಟೆ ಒಡೆಯುತ್ತದೇನೋ ಗೊತ್ತಿಲ್ಲ. 

Bettada Hoovu (1985)

ಮೇರುನಟ ರಾಜಕುಮಾರರ ಎಲ್ಲ ಮಕ್ಕಳಲ್ಲಿ ನಟನೆಯ ಕೌಶಲ ಇರುವುದು ನಿಜವೇ.  ಆದರೆ ಪುನೀತರಲ್ಲಿ ರಾಜಕುಮಾರರ ಎಲ್ಲಾ ಸ್ವಭಾವಗಳೂ ಬೇರೆ ಬೇರೆ ಪ್ರಮಾಣದಲ್ಲಿ ಮೇಳೈಸಿದ್ದವು. ಅನೇಕರು (ನನ್ನನ್ನೂ ಸೇರಿ) ಪುನೀತರನ್ನು ಅವರ ತಂದೆ ರಾಜಕುಮಾರರ ಜೀವಂತ ಪ್ರತಿನಿಧಿಯೆಂದೇ ಭಾವಿಸಿದ್ದುದು ಸುಳ್ಳಲ್ಲ. ರಾಜಕುಮಾರರಂತೆ ಸದ್ದಿಲ್ಲದೇ ಅನೇಕ ಸಮಾಜಸೇವಾ ಕೆಲಸಗಳಲ್ಲಿ ತೊಡಗಿಕೊಂಡಿದ್ದೂ ಪುನೀತರನ್ನು ಜನರ ಹತ್ತಿರ ಎಳೆದೊಯ್ದದ್ದು ನಿಜ. ಎಲ್ಲಕ್ಕಿಂತ ಮಿಗಿಲಾಗಿ ರಾಜಕುಮಾರರ ನೆರಳಿನಲ್ಲೇ ಇದ್ದುಕೊಂಡು, ಬೆಟ್ಟದ ಹೂವು ಮತ್ತು ಭಕ್ತ ಪ್ರಹ್ಲಾದ ನಂಥ ಅದ್ಭುತ ಚಿತ್ರಗಳಲ್ಲಿ ನಟಿಸಿದ್ದ ಪುನೀತರಿಗೆ ಕನ್ನಡ ಚಿತ್ರರಂಗದಲ್ಲಿ ಅಪೂರ್ವವಾದ ಅನುಭವವಿತ್ತು.  ಅವರು ಇನ್ನೂ 20 ವರ್ಷವಾದರೂ ಬದುಕಿದ್ದಿದ್ದರೆ (ಇಪ್ಪತ್ತೇ ಏಕೆ? ಅವರ ಕುಟುಂಬದವರಿಗೆ ಇನ್ನೊಂದು ದಿನ ಅವರು ಜೀವಂತವಾಗಿ ಸಿಕ್ಕರೂ ನೂರು ವರ್ಷಗಳಿಗೆ ಸಮನಾದೀತು)… ಬದುಕಿದ್ದಿದ್ದರೆ ಕನ್ನಡ ಚಿತ್ರರಂಗ ಮಾಡಬಹುದಾಗಿದ್ದ ಅನೇಕ ಸಮಾಜಮುಖಿ ಚಿತ್ರನಿರ್ಮಾಣ ಪ್ರಯೋಗಗಳಲ್ಲಿ ಪುನೀತರ ಕಾಣಿಕೆ ದೊಡ್ಡ ಪ್ರಮಾಣದಲ್ಲಿ ಇರುತ್ತಿತ್ತು ಎಂಬುದು ಮಿಡಿವ ಮನಸ್ಸುಗಳಿಗೆ ಗೊತ್ತಿದೆ. ಅವರಿಗೆ ನಾಮ ಬಲ, ಕರ್ನಾಟಕದ ನೆಲದ ಬಲ, ಹಣ ಬಲ, ಜನಪ್ರೀತಿಯ ಬಲ ಎಲ್ಲವೂ ಇದ್ದವು.  ತಮ್ಮ ಪಾಡಿಗೆ ತಾವು ಅರಳಿ, ಕಂಪನ್ನು ಸೂಸಿ, ದುಂಬಿಗಳನ್ನು ಅರಸಿ, ತಮ್ಮ ಕೆಲಸ ಮುಗಿಸಿ ಬಾಡಿಹೋದವು ಎನ್ನುವ ಹೂವುಗಳು ಅಸಂಖ್ಯ. ಆದರೆ ಎಲ್ಲ ಹೂವುಗಳಿಗೂ “ಕಾಡಿನಲ್ಲಿ ಇದ್ದೆ, ಹೋದೆ” ಎನ್ನುವ ಹಕ್ಕು ಇರುವುದಿಲ್ಲ. ಬೆಟ್ಟಗಳ ಇಳಿಜಾರಿನ ಕಾಡುಗಳಿಂದ ಕೆಲ ಹೂವುಗಳನ್ನು ಬೆಟ್ಟಕ್ಕೆ ಹೊತ್ತಿಕೊಂಡು ಹೋಗಿರುತ್ತಾರೆ. ಬೆಟ್ಟದ ಮೇಲೆ ಕಲ್ಲು ಕರಗುವವರೆಗೆ ಯಾವ ಹೂವೂ ಇರುವುದಿಲ್ಲ.  ಆದರೆ ಇಂಥಿಂಥ ಹೂವಿಗೆ ಇಷ್ಟು ಆಯಸ್ಸು ಎಂಬ ನಿರೀಕ್ಷೆ ಇರುವುದು ಅನುಭವದ ಮಾತಲ್ಲವೇ.  ಹತ್ತು ದಿನ ಸಲ್ಲಬೇಕಾದ ಹೂವು ನಾಲ್ಕೇ ದಿನಕ್ಕೆ ಬಾಡಿ ಹೋದರೆ ಅಲ್ಲಿಗೆ ಆ ಹೂವನ್ನು ಹೊತ್ತವರ ಶ್ರಮ ತನ್ನ ಸಾರ್ಥಕತೆಯನ್ನು ಪೂರ್ಣ ಪ್ರಮಾಣದಲ್ಲಿ ಕಾಣಲಿಲ್ಲ ಎಂಬಲ್ಲಿರುವ ಹತಾಶ ಭಾವವು ಹೂ-ಹೊತ್ತವರಲ್ಲಿ ಮತ್ತು ಬೆಟ್ಟದಲ್ಲಿ ಮಡುಗಟ್ಟುತ್ತದೆ.

ಪುನೀತರ ಅಕಾಲಿಕ ಮರಣದಿಂದ ಅವರ ಅಭಿಮಾನಿಗಳಿಗೆ ತೀವ್ರ ಆಘಾತ ಆಗಿರುವುದು ಸಹಜ.  ಅನೇಕರಿಗೆ “ನೆಚ್ಚಿನ ಹೀರೋ ಇಲ್ಲ” ಎನ್ನುವ ಭೌತಿಕ ಶೂನ್ಯವಷ್ಟೇ ಕಾಣಬಹುದು.  ಆದರೆ ಯಾವುದೇ ಹೂವು ಅಲ್ಪಾಯುಷಿ ಎಂಬುದು ಹೂವಿಗಿರಲಿ, ಅದನ್ನು ಹೊತ್ತವರಿಗಿರಲಿ, ಎಲ್ಲರನ್ನೂ ಸೆಳೆಯುವ ಬೆಟ್ಟಕ್ಕೂ ಗೊತ್ತಿರುವುದಿಲ್ಲ. ಹೂವು ತನ್ನ ಉದ್ದೇಶ ಸಾಧಿಸಿತೇ ಎಂಬುದೂ ಉತ್ತರಿಸಲಾಗದ ಪ್ರಶ್ನೆ. ದೇವರಿಗೆ ಸಲ್ಲುವುದು ಶ್ರೇಷ್ಠವೇ ಅಥವಾ ತನ್ನ ಪೀಳಿಗೆಯನ್ನು ಮುಂದುವರಿಸಲು ಸಹಾಯ ಮಾಡಿ ಕರ್ತವ್ಯ ಪೂರೈಸುವುದೇ ಹೂವಿನ ಸಾರ್ಥಕತೆಗೆ ಸಾಕೇ? ಬಹುವೇಳೆ ನಷ್ಟ ಬೆಟ್ಟಕ್ಕೇ ಹೊರತು ಹೂವಿಗಲ್ಲ ಎಂದು ತೋರುತ್ತದೆ. ಕರ್ನಾಟಕ ಮಾತೆಗೆ ತನ್ನ ಪ್ರತಿಭಾನ್ವಿತ ಮತ್ತು ಶಕ್ತ ಮಕ್ಕಳನ್ನು ಉಳಿಸಿಕೊಳ್ಳುವ ಯೋಗ ಕಡಿಮೆ ಎಂದೇ ತೋರುತ್ತದೆ.  ಶಂಕರ ನಾಗ್, ಡಿ ಆರ್ ನಾಗರಾಜ್ ಅವರಂಥ ಅಲ್ಪಾಯುಷಿ ಪ್ರತಿಭೆಗಳನ್ನು ಕಳೆದುಕೊಂಡ ನಾಡಿಗೆ ಪುನೀತರ ಸಾವು ಅರಿಯದ ಪೆಟ್ಟನ್ನೇನೂ ಕೊಟ್ಟಿಲ್ಲ. ಪುನೀತರ ಸಾವಿನಿಂದ ಕನ್ನಡ ಚಿತ್ರರಂಗವು ಕಾಣಬಹುದಾಗಿದ್ದ ಅನೇಕ ಕನಸುಗಳು ಸತ್ತಿವೆ. ಚಿತ್ರರಂಗದ ಹಿಂದಿನ ತಲೆಮಾರಿನೊಂದಿಗೆ ಬೇರಿನಿಂದಲೇ ಅಂಟಿಕೊಂಡು ಕಾಂಡದಂತೆ ಬೆಳೆದಿದ್ದ ಒಂದು ಕೊಂಬೆ ಕಳಚಿ ಬಿದ್ದಿದೆ. ಆ ನಂಟಿನ ಅಂಟಿನ ಅನುಭವದ ಜೀವಂತ ರೂಪ ಇಲ್ಲದೆ ಇರುವುದರಿಂದ ಆಗಿರುವ ನಷ್ಟವು ದಶಕಗಳವರೆಗೆ ಕರ್ನಾಟಕದ ಚಿತ್ರರಂಗದ ಸಾಧ್ಯತೆಗಳನ್ನು ಕಾಡುವುದರಲ್ಲಿ ನನಗೆ ಎಳ್ಳಷ್ಟೂ ಸಂಶಯವಿಲ್ಲ.

Please have your say