ಮರದ ಕೆಳಗಿನ ಮಳೆ (ಕವನ ಸಂಕಲನ)

mkm_poetry_cantheeravaಕಂಠೀರವನ ಚೊಚ್ಚಲ ಕವನ ಸಂಕಲನ “ಮರದ ಕೆಳಗಿನ ಮಳೆ” ಕಳೆದ ತಿಂಗಳು ಬೆಂಗಳೂರಿನಲ್ಲಿ ಬಿಡುಗಡೆಯಾಯ್ತು ಎಂದು ನಿಮ್ಮೆಲ್ಲರಿಗೂ ತಿಳಿಸಲು ಹರ್ಷವಾಗುತ್ತಿದೆ.  ಒಟ್ಟು ೩೯ ಕವನಗಳಿರುವ ಕವನ ಸಂಕಲನವನ್ನು ಕಾಮಧೇನು ಪುಸ್ತಕ ಭವನ ಹೊರತಂದಿದೆ. ಪುಸ್ತಕಕ್ಕೆ ಹಿರಿಯ ವಿಮರ್ಶಕರಾದ ಪ್ರೊ. ಸಿ. ಎನ್. ರಾಮಚಂದ್ರನ್ ಅವರು ಮುನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ.  ಕನ್ನಡ ಕವಿ ಎಚ್.ಎಸ್. ವೆಂಕಟೇಶ ಮೂರ್ತಿಗಳು ಬೆನ್ನುಡಿಯನ್ನು ಬರೆದು ಶುಭ ಹಾರೈಸಿದ್ದಾರೆ.  ಕಂಠೀರವ ಆರು ವರ್ಷಗಳನ್ನು ಪೂರೈಸುತ್ತಿರುವ ಈ ಸಮಯದಲ್ಲಿ ಕವನ ಸಂಕಲನ ಹೊರ ಬಂದಿರುವುದು ನನಗೆ ಹೆಚ್ಚಿನ ಸಂತಸವನ್ನು ತಂದಿದೆ.  ಅದರ ನೆನಪಿಗಾಗಿ ಕುವೆಂಪು ಅವರ ಹುಟ್ಟೂರು ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿ ಗ್ರಾಮಕ್ಕೆ ಭೇಟಿಕೊಟ್ಟ ನನ್ನ ಅನುಭವವನ್ನು ದಾಖಲಿಸುತ್ತಿದ್ದೇನೆ.

ನಾನು ಇತ್ತೀಚೆಗಷ್ಟೇ ಕುಪ್ಪಳಿಗೆ ಹೋಗಿ ಬಂದೆ.  ಕನ್ನಡವನ್ನು ಅದರ ಮಿತಿಯ ಅಂಚಿನವರೆಗೂ ಎಳೆದೊಯ್ಯುವ  ಕುವೆಂಪು ಅವರ ಸಾಮರ್ಥ್ಯ ಯಾವುದೇ ಭಾಷೆಯ ಯಾವುದೇ ಕವಿಯನ್ನು ನಾಚಿಸಬಲ್ಲುದು.  ತೀರ್ಥಹಳ್ಳಿಯ ಸುತ್ತಮುತ್ತ ಪ್ರಕೃತಿ ಸೌಂದರ್ಯಕ್ಕೇನೂ ಬರವಿಲ್ಲ.  ಅಂತಹ ಪರಿಸರದಲ್ಲಿ ಕಾಡುಕಲ್ಲಿಗೂ ಸಹ ಕವಿಯಾಗುವ ಸಾಮರ್ಥ್ಯ ಬರಬಹುದು.   ಆದರೆ ಆರ್ಥಿಕ ಶ್ರೀಮಂತಿಕೆ ಇರುವೆಡೆ ಕವಿ ಇರುವುದು ಅಪರೂಪ (ಬೇಕಾದಷ್ಟು ಅಪವಾದಗಳುಂಟು).  ಲಲಿತಕಲೆಗಳಲ್ಲಿ ಅನೇಕ ರಾಜ ಮಹಾರಾಜರು ಹೆಸರು ಮಾಡಿರುವುದು ಚಾರಿತ್ರಿಕವಾಗಿ ನಿಜವೇ.  ಅರ್ಥಶ್ರೀಮಂತಿಕೆ  ಇರುವಲ್ಲಿ  ವಿದ್ವತ್ ಇರಬಹುದು, ಪ್ರೌಢಿಮೆ ಪರಿಣಿತಿಗಳಿರಬಹುದು.  ಆದರೆ ಕವಿಯಾದವನು ಯಾವತ್ತಿಗೂ ಶ್ರೀಸಾಮಾನ್ಯನಾದರೇ ಅವನ ಕವಿತೆಗೆ ಕಸುವು ಬರಲು ಸಾಧ್ಯ.  ಕೋಟ್ಯಾನುಕೋಟಿ ಸಾಮಾನ್ಯ ಅನುಭವಗಳ ಸಹಾಯದಿಂದಲೇ ನಿಸರ್ಗವು ಅಸಾಮಾನ್ಯವಾದುದನ್ನು ಸೃಷ್ಟಿಸಲು ಸಾಧ್ಯ.

ಕುವೆಂಪು ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರು.  ಆದರೆ, ಕುಪ್ಪಳಿಯಲ್ಲಿ ಕುವೆಂಪು ಅವರ ಜೀವನ ಶೈಲಿ, ವೈಭವೋಪೇತ ಚೌಕಿ ಮನೆ, ಶ್ರೀಮಂತಿಕೆ ಇವೆಲ್ಲವನ್ನೂ ನೋಡಿದ ಮೇಲೆ ಕುವೆಂಪು ಅವರನ್ನು ಕನ್ನಡದ ಮಾದರಿ ಕವಿಯೆಂದು ಪರಿಗಣಿಸಬಹುದೇ ಎಂದು ಪ್ರಶ್ನಿಸಿಕೊಳ್ಳುವಾಗಲೇ ಅವರ ಅತ್ಯುತ್ತಮ ಕವನಗಳ ನೆನಪು ನನ್ನ ಅನುಮಾನ ನಿರಾಧಾರವಾದುದೆಂದು ನನ್ನ ಮನಸ್ಸಿನ ಬಾಯ್ಮುಚ್ಚಿಸಿತು.   ಕೆಲವೊಮ್ಮೆ ಯಾವುದು ನಮ್ಮಲ್ಲಿರುವುದೋ, ಯಾವುದು ನಮ್ಮಲ್ಲಿ ಮಾತ್ರ ಇದ್ದು ಇತರರು ಅದಕ್ಕಾಗಿ ಹಂಬಲಿಸುತ್ತಿರುವರೋ ಅಂಥ ವಸ್ತುವೇ ನಮಗೆ ಬೇಡವಾಗುತ್ತದೆ.  ಕವಿತ್ವ ಮತ್ತು ಕವಿಯ ಬಗೆಗಿನ ಕುವೆಂಪು ಅವರ ವಿಚಾರ ಧಾರೆಯ ಕೆಲವು ತುಣುಕುಗಳನ್ನು ಕುಪ್ಪಳಿಯ ಸಭಾಂಗಣದಲ್ಲಿ ಗೋಡೆಗಲ್ಲುಗಳ ಮೇಲೆ ಕೆತ್ತಲಾಗಿದೆ. ಅದನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

“ತಪಸ್ಸಿಲ್ಲದ ಕವಿ ಕುಕವಿ.  ದರ್ಶನ ಮೂಲವಲ್ಲದ ಕವಿತೆ ಜಳ್ಳು.  ಅದು ತೆರೆಯ ಮೇಲೆ ತೇಲುವ ನೊರೆಯೇ ಹೊರತು ಕಡಲಾಳದ ಮುತ್ತಲ್ಲ.  ನೊರೆ ಕ್ಷಣಿಕ ಮನೋಹರವಾದುದು.  ಮುತ್ತುಗಳಂತೆ ಶಾಶ್ವತ ಘನವಾದುದಲ್ಲ.  ಲಘು ಕಾವ್ಯವು ತಾತ್ಕಾಲಿಕ ಪ್ರಚೋದನಕಾರಿಯಾಗಿ ನಶಿಸಿಹೋಗುತ್ತದೆ.  ಕವಿಯ ತಪಸ್ಸಿನಿಂದ ದರ್ಶನಾತ್ಮಕವಾಗಿ ಮೂಡುವ ಕಾವ್ಯ ಅಮೃತಜ್ಯೋತಿಯಾಗಿ ಜೀವನವನ್ನು ಬೆಳಗುತ್ತದೆ.”

“ಕವಿಯ ಮನ ನಂದನ ವನ, ಆನಂದ ರಸ ನಿಕೇತನ, ಅಲ್ಲಿ ಪಾಪವೂ ಪುಣ್ಯದ ವಾಹನ, ಅಲ್ಲಿ ದುಃಖವೂ ಸುಖದ ಜವಾನ, ಅಲ್ಲಿ ಸಾವೂ ಅಮೃತ ಯಾನ” -ಮೇ ೯, ೧೯೬೦

 ಕವಿಶೈಲದಲ್ಲಿ ಒಂದು ಹತ್ತು ನಿಮಿಷ ಕುಳಿತಿದ್ದೆ.  ಅಲ್ಲಿನ ಬಂಡೆಯೊಂದರ ಮೇಲೆ ೧೯೩೬ ರಲ್ಲಿ ಕುವೆಂಪು ಮತ್ತು ಅವರ ಗುರುಗಳಲ್ಲಿ ಕೆಲವರು  ತಮ್ಮ ಇನಿಷಿಯಲ್ಸ್ ಗಳನ್ನ ಕೆತ್ತಿರುವುದನ್ನು ನೋಡಿದೆ.  ಸ್ಥಳೀಯರೊಬ್ಬರು ಅಲ್ಲೇ ಕುಳಿತು, ಬಂದು ಹೋಗುತ್ತಿದ್ದ ಪ್ರವಾಸಿಗಳಿಗೆ ಅದರ ಮಾಹಿತಿ ಕೊಡುತ್ತಿದ್ದರು.  ಯಾರೋ ಅಮೆರಿಕದಿಂದ ಉದುರಿ ಬಿದ್ದ ಕನ್ನಡದವರು “ಪರವಾಗಿಲ್ಲ! ಕವಿಗಳೂ ಹೀಗೆಲ್ಲ ಹೆಸರು ಕೆತ್ತುತ್ತಿದ್ರಾ?” ಎಂದು ಕೇಳಿದುದಕ್ಕೆ ದೇವಂಗಿ ಗ್ರಾಮದ ಆ ಮಾಹಿತಿದಾರರು ” ಕವಿಗಳು ಬರೀತಾರ , ಕಪಿಗಳು ಕೆತ್ತತಾವ  ” ಎಂದು ಮಾರ್ಮಿಕವಾಗಿ ನುಡಿದರು.

2 thoughts on “ಮರದ ಕೆಳಗಿನ ಮಳೆ (ಕವನ ಸಂಕಲನ)”

Please have your say